


ಡೈಲಿ ವಾರ್ತೆ:JAN/25/2026

ಹಿರಿಯಡ್ಕದ ಅತ್ರಾಡಿ ಸ್ವರ್ಣ ನದಿಯಲ್ಲಿ ಅಕ್ರಮ ಮರಳು ಸಾಗಣೆ: ಪೊಲೀಸ್ ದಾಳಿ, 21 ಯುನಿಟ್ ಮರಳು ವಶ

ಹಿರಿಯಡ್ಕ : ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ರಾಡಿ ಗ್ರಾಮದಲ್ಲಿನ ಸ್ವರ್ಣ ನದಿಯಲ್ಲಿ ಪೊಲೀಸರು ದಾಳಿ ನಡೆಸಿದ್ದು, 21 ಯುನಿಟ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಜ.24 ರಂದು ರಾತ್ರಿ ಸುಮಾರು 10.15 ಗಂಟೆಗೆ, ಅತ್ರಾಡಿ ಗ್ರಾಮದ ಪರೀಕ ಸ್ವರ್ಣ ನದಿಯಲ್ಲಿ ಆರೋಪಿತರು ದೋಣಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ದಡಕ್ಕೆ ಸಾಗಿಸುತ್ತಿರುವ ಮಾಹಿತಿ ಮೇರೆಗೆ, ತಿಮ್ಮೇಶ್ ಪಿಎಸ್‌ಐ, ಮಣಿಪಾಲ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು. ದಾಳಿ ವೇಳೆ ದೋಣಿಯಲ್ಲಿ ಇದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ, ನದಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪ್ರಕಾಶ ಶೆಟ್ಟಿ ಎಂಬವರ ಮನೆಯ ಅಂಗಳದಲ್ಲಿ 6 ಟಿಪ್ಪರ್ ಲೋಡ್‌ಗಳಷ್ಟು ಮರಳು ಸಂಗ್ರಹಿಸಿರುವುದು ಪತ್ತೆಯಾಯಿತು. ಜೊತೆಗೆ ದೋಣಿಯಲ್ಲಿ ಸುಮಾರು 3 ಯುನಿಟ್ ಮರಳು ಪತ್ತೆಯಾಗಿದ್ದು, ಒಟ್ಟು 21 ಯುನಿಟ್ ಅಕ್ರಮ ಮರಳು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ ರೂ. 42,000/- ಆಗಿದ್ದು, ದೋಣಿಯ ಅಂದಾಜು ಮೌಲ್ಯ ರೂ. 3 ಲಕ್ಷ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಕ್ರಮ ಮರಳು ಸಂಗ್ರಹವನ್ನು ರತ್ನಾಕರ ಶೆಟ್ಟಿ ಪರೀಕ ಅವರು ಇತರೆ ಆರೋಪಿತರೊಂದಿಗೆ ಸೇರಿ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಆರೋಪಿತರಾದ ರತ್ನಾಕರ ಶೆಟ್ಟಿ, ಪ್ರಸಾದ್ ಮತ್ತು ಇತರರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 303(2), 112 ಹಾಗೂ ಗಣಿಗಾರಿಕೆ ಮತ್ತು ಖನಿಜ ನಿಯಂತ್ರಣ ಕಾಯ್ದೆ (MMRD Act) ಕಲಂ 4(1-a), 21(4)ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.