ಡೈಲಿ ವಾರ್ತೆ:JAN/25/2026

ಬ್ರಹ್ಮಾವರದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಮಕ್ಕಳ ದೈಹಿಕ–ಮಾನಸಿಕ ಬೆಳವಣಿಗೆಗೆ ಈಜು ಅತ್ಯಗತ್ಯ -ಭುಜಂಗ್ ಶೆಟ್ಟಿ

ಬ್ರಹ್ಮಾವರ,ಜ.25: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿವಿಧ ವಯೋಮಾನದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರು ಮತ್ತು ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಸ್ಪೋರ್ಟ್ಸ್ ಕ್ಲಬ್‌ನ ಬೈಕಾಡಿ ಸಲ್ವಡೋರ್ ನೋರನ್ಹಾ ಅವರ ಈಜುಕೊಳದಲ್ಲಿ ಯಶಸ್ವಿಯಾಗಿ ಜರಗಿತು.

ಸ್ಪರ್ಧೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಈಜು ಕ್ರೀಡೆ ಮಕ್ಕಳಿಗೆ ಆತ್ಮಸ್ಥೈರ್ಯ ನೀಡುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಅಲ್ಲದೆ ಹೆತ್ತವರು ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಕರೆ ನೀಡಿದರು.

ಉಡುಪಿಯ ಸಾಫಲ್ಯ ಟ್ರಸ್ಟ್‌ನ ಪ್ರವರ್ತಕರು ಹಾಗೂ ಸಮಾಜ ಸೇವಕಿ ನಿರೂಪಮ ಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಮಕ್ಕಳು ಮೊಬೈಲ್ ಬಳಕೆಯಿಂದ ದೂರ ಉಳಿದು, ತಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತಹ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಕೌಶಲ್ಯಭರಿತ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕ್ರೀಡಾಪ್ರೇಮಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ಜಿ. ನಾಯರ್ ವಹಿಸಿ, ಶಾಲಾ ಪರೀಕ್ಷೆಗಳ ನಡುವೆಯೂ ನೂರಾರು ಸ್ಪರ್ಧಾಳುಗಳು ಭಾಗವಹಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಸ್ವಾಗತ ಭಾಷಣ ಮಾಡಿದರು.
ಕಾರ್ಯದರ್ಶಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಖಜಾಂಜಿ ವಿಕ್ರಂ ಪ್ರಭುಗಳು ಕಾರ್ಯಕ್ರಮ ನಿರ್ವಹಿಸಿದರು.