ಡೈಲಿ ವಾರ್ತೆ:JAN/25/2026

“ನಕಲಿ ಹಿಂದುತ್ವ–ನಕಲಿ ಸಂತರು: ಉಡುಪಿ–ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ ರಾಜಕೀಯ ಮುಖವಾಡ” – ಕೋಟ ನಾಗೇಂದ್ರ ಪುತ್ರನ್

ಉಡುಪಿ: ನಿಷ್ಠಾವಂತ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮಾತನಾಡುವುದು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ರಾಜಕೀಯ ಗುರುಗಳನ್ನೇ ಮೂಲೆಗುಂಪು ಮಾಡಿ, ನಕಲಿ ಹಿಂದುತ್ವವನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡುವ ಪ್ರಯತ್ನ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಆರೋಪಿಸಿದ್ದಾರೆ.

ಹಿಂದೆ ಪಕ್ಷ ಯಾವುದೇ ಇರಲಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರಾಜಕೀಯದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದ ನಾಯಕರಿದ್ದರು. ಆದರೆ ಇಂದಿನ ನಕಲಿ ರಾಜಕಾರಣಿಗಳಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಕುಂಟಿತಗೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇದು ಉಡುಪಿ ಮತ್ತು ಮಂಗಳೂರು ಜನತೆಗೆ ಶೋಭೆ ತರುವ ರಾಜಕಾರಣ ಅಲ್ಲ ಎಂದು ಅವರು ಹೇಳಿದರು.

ಬೈಂದೂರಿನಲ್ಲಿ ಒಬ್ಬ ಬರಿಗಾಲ ಸಂತನ ಹೆಸರಿನಲ್ಲಿ ನಡೆಯುವ ರಾಜಕೀಯ ಹಾಗೂ ಉಡುಪಿಯಲ್ಲಿ ವಿಷಪೂರಿತ ನಕಲಿ ಹಿಂದುತ್ವ ರಾಜಕಾರಣ ನಡೆಸುತ್ತಿರುವ ಕೆಲ ಶಾಸಕರಿಂದ ಜಿಲ್ಲೆ ಅಭಿವೃದ್ಧಿ ಹಾಗೂ ಕ್ಷೇತ್ರಾಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

ಉಡುಪಿ ಜಿಲ್ಲೆಯಲ್ಲಿ ಮೇಧಾವಿ, ಪ್ರಬುದ್ಧ ಹಾಗೂ ಜನಪರ ರಾಜಕಾರಣಿಗಳನ್ನು ಈ ಹಿಂದೆಯೂ ನೋಡಿದ್ದೇವೆ. ಆದರೆ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ರಾಜಕೀಯವಾಗಿ, ನೈತಿಕವಾಗಿ ಹಾಗೂ ನಿಷ್ಠೆಯ ದೃಷ್ಟಿಯಿಂದ ಅಯೋಗ್ಯ ರಾಜಕಾರಣಿಗಳು ಮುಂಚೂಣಿಗೆ ಬರುತ್ತಿರುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ಕೋಟ ನಾಗೇಂದ್ರ ಪುತ್ರನ್ ಹೇಳಿದರು.