


ಡೈಲಿ ವಾರ್ತೆ:JAN/25/2026

“ಸಾಹಿತ್ಯ–ಸಂಗೀತಗಳ ಸಂಗಮವೇ ಗಮಕ: ಯುವಜನತೆ ಗಮಕ ಕಲೆಯತ್ತ ಒಲಿಯಬೇಕು”

ಉಪ್ಪಿನಕುದ್ರು:”ಸಾಹಿತ್ಯ ಮತ್ತು ಸಂಗೀತಗಳು ಸರಸ್ವತಿ ದೇವಿಯ ಸ್ತನದ್ವಯಗಳೆಂಬ ಉಕ್ತಿಯಿದೆ. ಈ ಎರಡೂ ಮೇಳೈಸಿದಾಗ ಮನೋರಂಜನೆಯೊಂದಿಗೆ ಬೌದ್ಧಿಕ ವಿಕಾಸವೂ ಸಾಧ್ಯವಾಗುತ್ತದೆ. ಪುರಾತನ ಹಾಗೂ ನವೀನ ಕವಿ ಸಾಹಿತ್ಯಗಳ ರಾಗಭಾವಪೂರ್ಣ ಓದು ಗಮಕ ಕಲೆಯಾಗಿ ಪರಂಪರೆಯಿಂದ ಬೆಳೆದುಬಂದಿದೆ. ಯುವಜನತೆ ಗಮಕ ಕಲೆಯತ್ತ ಒಲಿಯಬೇಕು” ಎಂದು ಕುಂದಾಪುರ ತಾಲೂಕು ಘಟಕ ಗಮಕ ಕಲಾಪರಿಷತ್ತಿನ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಹೇಳಿದರು.

ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಜನವರಿ 25ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಗಮಕ ವಾಚನ–ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಘವಾಂಕ ಕವಿಯ ‘ಹರಿಶ್ಚಂದ್ರ ಚರಿತ್ರೆ’ ಕಾವ್ಯದ ವಿರೂಪಾಕ್ಷ ಸಾಕ್ಷಾತ್ಕಾರ ಭಾಗವನ್ನು ಗಮಕಿ ಕುಮಾರಿ ಕಾವ್ಯ ಹಂದೆ ಗಮಕ ವಾಚನ ಮಾಡಿದರು. ಅದಕ್ಕೆ ಸುಜಯೀಂದ್ರ ಹಂದೆ ಸಮಗ್ರವಾದ ವ್ಯಾಖ್ಯಾನ ನೀಡಿದರು.
ಸಮಾರಂಭದಲ್ಲಿ ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪೈ, ಕಲಾ ಸಾಹಿತಿ ಜನಾರ್ದನ ಹಂದೆ, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ರುವಾರಿ ಕೊಗ್ಗ ಭಾಸ್ಕರ ಕಾಮತ್ ಹಾಗೂ ಸು.ವಿ.ಕಾ. ಅಧ್ಯಕ್ಷೆ ಶ್ರೀಮತಿ ವಿನೀತ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.