


ಡೈಲಿ ವಾರ್ತೆ:JAN/26/2026

ಸಿದ್ದಾಪುರ ಏತ ನೀರಾವರಿಗೆ ವಿರೋಧವಿಲ್ಲ: ಆದರೆ ವಾರಾಹಿ ಮೂಲ ಯೋಜನೆಗೆ ಧಕ್ಕೆ ಆಗಬಾರದು – ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪುರ: ವಾರಾಹಿ ನದಿ ಆಧಾರಿತ ಸಿದ್ದಾಪುರ ಏತ ನೀರಾವರಿ ಯೋಜನೆಗೆ ತಾನು ವಿರೋಧಿಯಾಗಿಲ್ಲ. ಆದರೆ ಮೂಲ ವಾರಾಹಿ ಯೋಜನೆಯ ಆಶಯ ಹಾಗೂ ಗುರಿಗೆ ಧಕ್ಕೆಯಾಗುವ ಯಾವುದೇ ಕಾಮಗಾರಿಗಳು ನಡೆದರೆ ಅಣೆಕಟ್ಟಿನ ಕೆಳಭಾಗದ ರೈತರು ಹಾಗೂ ಕುಡಿಯುವ ನೀರಿನ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆತಂಕ ವ್ಯಕ್ತಪಡಿಸಿದರು.

ವಾರಾಹಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದ ಗ್ರಾಮ ಪಂಚಾಯತ್‌ಗಳ ರೈತರು, ಪಂಚಾಯತ್ ಕುಡಿಯುವ ನೀರಿನ ಫಲಾನುಭವಿಗಳು, ಸೌಕೂರು ಏತ ನೀರಾವರಿ ಯೋಜನೆಯ ಫಲಾನುಭವಿಗಳು ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಬಳಕೆದಾರರ ನೇತೃತ್ವದಲ್ಲಿ ಭಾನುವಾರ ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ನಡೆದ ಬೃಹತ್ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದಾಪುರಕ್ಕೆ ಏತ ನೀರಾವರಿ ಅಗತ್ಯ ಎಂಬುದರಲ್ಲಿ ಎಲ್ಲರಿಗೂ ಒಮ್ಮತವಿದೆ. ಆದರೆ ಹೊಸ ಕಾಮಗಾರಿಗಳು ವಾರಾಹಿ ಮೂಲ ಯೋಜನೆಯ ಗುರಿಯನ್ನು ಮೀರಿದರೆ ಅಣೆಕಟ್ಟಿನ ಕೆಳಭಾಗದ ಜನರಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಲ್ಲರಿಗೂ ನ್ಯಾಯಸಮ್ಮತವಾಗಿ ನೀರು ದೊರಕಬೇಕು ಎಂಬುದೇ ನನ್ನ ಕಳಕಳಿ ಎಂದು ಅವರು ಹೇಳಿದರು.
ಸಿದ್ದಾಪುರದ ಶೇ.70 ಭಾಗಕ್ಕೆ ಈಗಾಗಲೇ ವಾರಾಹಿ ನೀರು ತಲುಪುತ್ತಿಲ್ಲ. ಮುಂದಿನ ದಿನಗಳಲ್ಲಿ ಬಲದಂಡೆ ಯೋಜನೆ, ಶಂಕರನಾರಾಯಣ ಹಾಗೂ ಅಂಪಾರು ಭಾಗಗಳಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೋಳೆ ಶಂಕರನಾರಾಯಣ ದೇವಸ್ಥಾನ ಸೇರಿದಂತೆ ಅಣೆಕಟ್ಟಿನ ಕೆಳಭಾಗದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬುದು ನನ್ನ ಉದ್ದೇಶ ಎಂದು ಗೋಪಾಲ ಪೂಜಾರಿ ಸ್ಪಷ್ಟಪಡಿಸಿದರು.
ಈ ಕುರಿತು 2023ರಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, 2025ರಲ್ಲಿ ಅದನ್ನು ಪುನಃ ನೆನಪಿಸಿದ್ದೇನೆ. ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿರುವುದು ಸ್ವಾಗತಾರ್ಹ. ಆದರೆ ಆ ಸಮಿತಿಯಲ್ಲಿ ಸುರತ್ಕಲ್ ಎನ್‌ಐಟಿಕೆ ತಜ್ಞರನ್ನು ಸೇರಿಸಬೇಕು ಎಂಬುದು ನನ್ನ ಸ್ಪಷ್ಟವಾದ ಒತ್ತಾಯ ಎಂದು ಅವರು ಹೇಳಿದರು.
ಬಿಜೆಪಿಯಿಂದ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ತಾವು ಶಾಸಕರಾಗಿದ್ದ ಅವಧಿಯಲ್ಲಿ ಸುಬ್ಬರಾಡಿ, ರಾಜಾಡಿ, ಆಜ್ರಿ, ಹೆಮ್ಮಾಡಿಕಟ್ಟು, ಶಾರದಾಪುರ ಹಾಗೂ ಬಿಜೂರು ಅಣೆಕಟ್ಟುಗಳಿಗೆ ಅನುದಾನ ಮಂಜೂರಾಗಿತ್ತು. ಸೌಕೂರು ಏತ ನೀರಾವರಿ ಯೋಜನೆಯ ಡಿಪಿಆರ್ ಕೂಡ ಅದೇ ಸಮಯದಲ್ಲಿ ಸಿದ್ಧಗೊಂಡಿತ್ತು. ಈಗಿನ ಶಾಸಕರು ಮಾಡಿರುವ ಅಭಿವೃದ್ಧಿ ಏನು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.

ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ವಾರಾಹಿ ಮೂಲ ಯೋಜನೆಯಂತೆ 38 ಸಾವಿರ ಎಕರೆ ಭೂಮಿಗೆ ನೀರು ತಲುಪಬೇಕಿದೆ. ಆದರೆ ಇದುವರೆಗೆ ಕೇವಲ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ಮುಂದುವರಿದರೆ ಮೂಲ ಯೋಜನೆಯ ಗುರಿ ಸಾಧ್ಯವಾಗುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. ಸಿದ್ದಾಪುರಕ್ಕೆ ಏತ ನೀರಾವರಿ ಅಗತ್ಯವಿದ್ದರೂ ಅದು ಇತರ ಪ್ರದೇಶಗಳ ಹಕ್ಕಿನ ನೀರನ್ನು ಕಿತ್ತುಕೊಳ್ಳುವಂತಾಗಬಾರದು ಎಂದು ಅವರು ಹೇಳಿದರು.

ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಮಾತನಾಡಿ, ಸಿದ್ದಾಪುರ ಏತ ನೀರಾವರಿ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಪತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
2023ರಲ್ಲಿ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಯೋಜನೆ ತಡೆಯುವ ಯಾವುದೇ ಉದ್ದೇಶವಿಲ್ಲ; ಯೋಜನೆಯ ಸಾಧಕ–ಬಾಧಕಗಳು, ಹೋಳೆ ಶಂಕರನಾರಾಯಣ ದೇವಸ್ಥಾನ ಹಾಗೂ ಜಲಚರ ಜೀವಿಗಳಿಗೆ ಹಾನಿಯಾಗಬಾರದು ಎಂಬ ಕಾಳಜಿ ಮಾತ್ರ ವ್ಯಕ್ತವಾಗಿದೆ ಎಂದು ಸ್ಪಷ್ಟಪಡಿಸಿದರು.

ಆ ಪತ್ರದಲ್ಲಿ ಯೋಜನೆ ತಡೆಯುವ ಮಾತು ಇದ್ದರೆ ತಾವೂ ಹಾಗೂ ಗೋಪಾಲ ಪೂಜಾರಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯಲು ಸಿದ್ಧ ಎಂದು ಹೇಳಿದ ಅವರು, ಅಪಪ್ರಚಾರ ಮಾಡುವವರೂ ಅದೇ ರೀತಿ ಮಾಡಲು ಸಿದ್ಧರೇ ಎಂದು ಬಹಿರಂಗ ಸವಾಲು ಹಾಕಿದರು.
ಗೋಪಾಲ ಪೂಜಾರಿ ಹಾಗೂ ತಾವು ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಅವು ಸಂಪೂರ್ಣ ಸುಳ್ಳು ಎಂದು ಕಿಡಿಕಾರಿದರು. ಹೋರಿಯಬ್ಬೆ ಡ್ಯಾಂ ಕರಾವಳಿ ಜಿಲ್ಲೆಗೆ ನೀರು ಒದಗಿಸುವ ಮಹತ್ವದ ಯೋಜನೆ ಆಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದು ಎಂದು ಎಚ್ಚರಿಸಿದರು.
ತಜ್ಞರ ಸಮಿತಿ ವರದಿ ನೀಡುವವರೆಗೆ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಯಾವುದೇ ಬಿಲ್ ಪಾವತಿ ಮಾಡಬಾರದು ಎಂದು ಸಭೆ ಆಗ್ರಹಿಸಿತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಒಟ್ಟಾರೆ, ಸಿದ್ದಾಪುರ ಏತ ನೀರಾವರಿ ಯೋಜನೆ ಅಭಿವೃದ್ಧಿಯ ಹೆಸರಿನಲ್ಲಿ ವಾರಾಹಿ ಮೂಲ ಯೋಜನೆಯ ಗುರಿಯನ್ನು ಮರೆತಿದೆಯೇ? ಅಣೆಕಟ್ಟಿನ ಕೆಳಭಾಗದ ರೈತರು ಹಾಗೂ ಕುಡಿಯುವ ನೀರಿನ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ಗಂಭೀರವಾಗಿವೆ. ತಜ್ಞರ ಸಮಿತಿ ವರದಿಯ ಮೇಲೆಯೇ ಸಾವಿರಾರು ರೈತರ ಭವಿಷ್ಯ ಹಾಗೂ ಕುಡಿಯುವ ನೀರಿನ ಭದ್ರತೆ ಅವಲಂಬಿತವಾಗಿದೆ ಎಂಬುದು ಸಭೆಯ ಒತ್ತಾಯವಾಗಿತ್ತು.