

ಡೈಲಿ ವಾರ್ತೆ:ಜನವರಿ/30/2026


ಕೋಟ ಹಿರೇಮಹಾಲಿಂಗೇಶ್ವರ ಮಿತ್ರವೃಂದದ 50ನೇ ಸುವರ್ಣ ಸಂಭ್ರಮ – ಸಾಂಸ್ಕೃತಿಕ ವೈಭವ, ಸಭಾ ಕಾರ್ಯಕ್ರಮ

ಕೋಟ, ಜ.30: ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟದ ಅಂಗಸಂಸ್ಥೆಯಾದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ (ರಿ.), ಕೋಟ ಇವರ ವತಿಯಿಂದ ಆಯೋಜಿಸಲಾದ 50ನೇ ಸುವರ್ಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವು ಗುರುವಾರ ಸಂಜೆ ಗೀತಾನಂದ ಭವ್ಯ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಂಜೆ 7 ಗಂಟೆಯಿಂದ ಪುಟಾಣಿಗಳ ಸಾಂಸ್ಕೃತಿಕ ವೈಭವ ನಡೆಯಿತು. ಕಲ್ಮಾಡಿ ಅಂಗನವಾಡಿ ಹಾಗೂ ಕೋಟತಟ್ಟು ಮಕ್ಕಳಿಂದ ವಿವಿಧ ನೃತ್ಯ, ಹಾಡು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಮಿತ್ರವೃಂದವು ತನ್ನ ಐವತ್ತು ವರ್ಷದ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಮಿತ್ರವೃಂದದ ಐವತ್ತು ವರ್ಷದ ಸೇವಾ ಪಯಣವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾಲ್ಕೈದು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇಲ್ಲಿಯವರೆಗೆ ಊರಿನ ನಾಗರಿಕರ ಸಹಕಾರದೊಂದಿಗೆ ದೇವಸ್ಥಾನದ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ವ್ಯವಸ್ಥಾಪನಾ ಸಮಿತಿಯೊಂದಿಗೆ ಕೈಜೋಡಿಸಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹಿಂದಿನ ದಿನಗಳಲ್ಲಿ ಜಾತ್ರೆಯ ಸಂದರ್ಭದಲ್ಲಿ ಸಿಡಿಮದ್ದಿನ ಪ್ರದರ್ಶನಕ್ಕೆ ಸೀಮಿತವಾಗಿದ್ದ ಚಟುವಟಿಕೆಗಳು, ಇಂದು ಶಿಸ್ತಿನ ಹಾಗೂ ಅದ್ದೂರಿ ಕಾರ್ಯಕ್ರಮಗಳ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವೆಂದರು.

ಈ ಸಂದರ್ಭದಲ್ಲಿ 50ನೇ ಸುವರ್ಣ ಸಂಭ್ರಮದ ಅಂಗವಾಗಿ ಮಿತ್ರವೃಂದದ ಬೆಳವಣಿಗೆಗೆ ಸಹಕಾರ ನೀಡಿದ 10 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಗೌರವಾಧ್ಯಕ್ಷ ಗಣೇಶ ಭಟ್ಟ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್, ಕುಂದಾಪುರ ಮನೋವೈದ್ಯ ಡಾ. ಪ್ರಕಾಶ ತೋಳಾರ್, ಕರ್ಣಾಟಕ ಡೆವಲಪರ್ಸ್ ಬ್ರಹ್ಮಾವರದ ಮುಖ್ಯಸ್ಥ ಚೇತನ್ ಕುಮಾರ್ ಶೆಟ್ಟಿ ಹಾಗೂ ಮಿತ್ರವೃಂದದ ಹಿರಿಯ ಆನಂದ್ ದೇವಾಡಿಗ ಉಪಸ್ಥಿತರಿದ್ದರು.
ಚಂದ್ರ ಆಚಾರಿ ಕೋಟ ಸ್ವಾಗತಿಸಿ, ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಕ್ತಾದಿಗಳು, ಊರಿನ ಗಣ್ಯರು ಹಾಗೂ ಮಿತ್ರವೃಂದದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಾತ್ರಿ 9.30ರಿಂದ ಅರೆಹೊಳೆ ಪ್ರತಿಷ್ಠಾನ (ರಿ.), ಮಂಗಳೂರು ಇವರಿಂದ “ಕೊಲ್ಲೂರು ಕ್ಷೇತ್ರ ಮಹಾತ್ಮೆ” ನೃತ್ಯರೂಪಕ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆಯಿತು.