

ಡೈಲಿ ವಾರ್ತೆ: ಫೆ./17/2026
ತೆಕ್ಕಟ್ಟೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತ: ಆನ್‌ಲೈನ್ ಸರ್ವೀಸ್ ಸೆಂಟರ್ ಭಸ್ಮ, ಲಕ್ಷಾಂತರ ರೂ. ನಷ್ಟ

ಕುಂದಾಪುರ: ಇಲ್ಲಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ–66ರ ಕನ್ನುಕೆರೆ ಸಮೀಪದ ಶ್ರೀನವಶಕ್ತಿ ಕಲ್ಯಾಣ ಮಂಟಪದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ‘ಆಶ್ಲೇಷ ಆನ್‌ಲೈನ್ ಸರ್ವೀಸ್ ಸೆಂಟರ್’ ನಲ್ಲಿ ಸೋಮವಾರ (ಫೆ.16) ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತದಿಂದ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದವು.
ಎಂದಿನಂತೆ ಅಂಗಡಿ ಮಾಲೀಕ ಫಣಿರಾಜ್ ಹತ್ವಾರ್ ಕೊರವಡಿ ಅವರು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ ನಂತರ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಸ್ಟೇಷನರಿ ಸಾಮಗ್ರಿಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಪರಿಕರಗಳು ಸುಟ್ಟು ಭಸ್ಮವಾಗಿವೆ.
ಘಟನೆಯಿಂದ ಅಂದಾಜು ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯ ಯುವಕರ ತಂಡ ತುರ್ತಾಗಿ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದು, ಬಳಿಕ ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದರು.
ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.