

ಡೈಲಿ ವಾರ್ತೆ: ಫೆ./17/2026
ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ಕಲ್ಲುತೂರಾಟ ಪ್ರಕರಣ: ಇಬ್ಬರು ವಶಕ್ಕೆ, ಉದ್ವಿಗ್ನತೆ ನಡುವೆಯೇ ಬಿಗಿ ಪೊಲೀಸ್ ಭದ್ರತೆ

ಚಿಕ್ಕಮಗಳೂರು, ಫೆ. 17: ಚಿಕ್ಕಮಗಳೂರು ನಗರದ ವಿಜಯನಗರ ಬಡಾವಣೆಯ ತಿಲಕ್ ಪಾರ್ಕ್ ಸಮೀಪದ ಮನೆಯೊಂದರ ಮೇಲೆ ಕಳೆದ ಒಂದು ವಾರದಿಂದ ರಾತ್ರಿ ವೇಳೆ ನಿರಂತರ ಕಲ್ಲುತೂರಾಟ ನಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೂ ನಾಲ್ವರು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.ಘಟನೆಯಿಂದಾಗಿ ಸೋಮವಾರ ರಾತ್ರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.
ಸಂತ್ರಸ್ತೆ ಸುಧಾ ಅವರ ದೂರಿನ ಪ್ರಕಾರ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮನೆ ಮೇಲೆ ಕಲ್ಲು ಎಸೆಯಲಾಗುತ್ತಿದ್ದು, ಕುಟುಂಬಸ್ಥರು ಭಯಭೀತ ಪರಿಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದ್ದಾರೆ. ಮನೆ ಮಾಲೀಕ ಗಗನ್ ಅವರ ಪ್ರಕಾರ, ತಾಯಿ ಮತ್ತು ತಂಗಿ ಮಾತ್ರ ಮನೆಯಲ್ಲಿ ಇರುವ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿದೆ. ಸೋಮವಾರ ರಾತ್ರಿ ಪ್ರಶ್ನಿಸಿದಾಗ ಯುವಕರೊಂದಿಗೆ ವಾಗ್ವಾದ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೆಲ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಈ ವೇಳೆ ಉಂಟಾದ ಗಲಾಟೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಹಾಗೂ ಸಮುದಾಯದ ಕೆಲ ಮುಖಂಡರು ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ, ಹಿಂದೂ ಸಂಘಟನೆಗಳು ಮನೆ ಮೇಲೆ ಕಲ್ಲು ಎಸೆದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಎಸ್‌ಡಿಪಿಐ ಮುಖಂಡ ಮುನೀರ್ ಪ್ರತಿಕ್ರಿಯಿಸಿ, ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಘಟನೆಯ ಹಿನ್ನೆಲೆದಲ್ಲಿ ಪೊಲೀಸ್ ಠಾಣೆ ಎದುರು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಎರಡೂ ಸಮುದಾಯದ ಯುವಕರು ಜಮಾವಣೆಗೊಂಡಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್‌ಪಿ ಜಯಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಠಾಣೆ ಹಾಗೂ ಆಸ್ಪತ್ರೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸದ್ಯ ಬಸವನಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಘಟನೆಗೆ ಕಾರಣವಾದ ನಿಖರ ಹಿನ್ನೆಲೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.