ಡೈಲಿ ವಾರ್ತೆ: ಫೆ./17/2026

ಮಹಿಳೆಯ ಸರ ಕಸಿದು ಓಡ್ತಿದ್ದ ಕಳ್ಳನನ್ನು ಒಂದು ಕಿಮೀ ಬೆನ್ನಟ್ಟಿದ ಕಾನ್‌ಸ್ಟೇಬಲ್: 6 ಲಕ್ಷದ ಚಿನ್ನದ ಸರ ಸಮೇತ ಸರಗಳ್ಳ ಅರೆಸ್ಟ್!

ಬೆಂಗಳೂರು, ಫೆ.5: ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದ ಕಳ್ಳನನ್ನು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಅವರು ಸುಮಾರು ಒಂದು ಕಿಲೋಮೀಟರ್ ದೂರ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಾಕ್ಷಾಯಣಿ ಎಂಬ ಮಹಿಳೆಯವರ 40 ಗ್ರಾಂ ತೂಕದ, ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಓಡುತ್ತಿದ್ದ ಸೈಯದ್ ಜಾಫರ್ ಎಂಬ ಆರೋಪಿಯನ್ನು ಹನುಮಂತ ಪುಟಾಣಿ ಅವರು ಸಾಹಸದಿಂದ ಬೆನ್ನಟ್ಟಿದರು.

ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಕಣ್ಣಿಗೆ ಬಿದ್ದ ಕೂಡಲೇ ಅವರು ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಬಂಧಿತನಿಂದ ಕಳುವಾದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಅವರ ಕರ್ತವ್ಯ ನಿಷ್ಠೆ ಹಾಗೂ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ಸರ ಕಳೆದುಕೊಂಡ ದಾಕ್ಷಾಯಣಿ ಅವರು ಕೂಡ ಪೊಲೀಸ್ ಪೇದೆಯ ಸಮಯೋಚಿತ ಕಾರ್ಯಾಚರಣೆಯನ್ನು ಮೆಚ್ಚಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕರ್ತವ್ಯದ ಸಮಯವಲ್ಲದ ಸಂದರ್ಭದಲ್ಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಅವರ ಸಾಹಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.