

ಡೈಲಿ ವಾರ್ತೆ: ಫೆ./19//2026
ಚಿಕ್ಕಮಗಳೂರು| ಹಿಂದೂ ಮನೆ ಮೇಲೆ ಕಲ್ಲುತೂರಾಟಕ್ಕೆ ತಿರುವು: ಕೋಮುಗಲಭೆ ವದಂತಿಗೆ ಬ್ರೇಕ್, ಇಬ್ಬರು ಹಿಂದೂ ಯುವಕರ ಬಂಧನ

ಚಿಕ್ಕಮಗಳೂರು, ಫೆ.19: ಕಾಫಿನಾಡು ಎಂದು ಖ್ಯಾತಿ ಪಡೆದ ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂ ಮನೆಯೊಂದರ ಮೇಲೆ ನಡೆದಿದ್ದ ಕಲ್ಲು ಎಸೆತ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಆರಂಭದಲ್ಲಿ ಕೋಮುಗಲಭೆ ಎಂಬ ಅನುಮಾನ ವ್ಯಕ್ತವಾಗಿದ್ದರೂ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಹಿಂದೂ ಯುವಕರನ್ನು ಬಂಧಿಸುವ ಮೂಲಕ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ.
ಬಂಧಿತರನ್ನು ಗೌರಿ ಕಾಲುವೆ ನಿವಾಸಿ ಭರತ್ (23) ಹಾಗೂ ರಾಮನಹಳ್ಳಿ ಮೂಲದ ದಿಲೀಪ್ (27) ಎಂದು ಗುರುತಿಸಲಾಗಿದೆ.
ಘಟನೆ ನಡೆಯುವ ಮೂರು ದಿನಗಳ ಹಿಂದಿನಿಂದಲೇ ಆರೋಪಿಗಳು ಕಲ್ಲುತೂರಾಟ ನಡೆದ ಮನೆಯ ಸುತ್ತ ಬೈಕ್‌ನಲ್ಲಿ ಸಂಚರಿಸುತ್ತಾ ಮನೆಮಂದಿಯನ್ನು ಹಿಂಬಾಲಿಸುತ್ತಿದ್ದರೆಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ವಾಸವಿರುವ ಸುಧಾ ಅವರು ಕೆಲವು ದಿನಗಳ ಹಿಂದೆ ತಮ್ಮ ಮನೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದರು. “ನಮ್ಮ ಮನೆಯ ಸುತ್ತ ಯಾಕೆ ಓಡಾಡುತ್ತೀರಿ?” ಎಂದು ಕೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದೇ ವೈಮನಸ್ಯದ ಹಿನ್ನೆಲೆಯಲ್ಲೇ ಮನೆ ಮೇಲೆ ಕಲ್ಲು ಎಸೆತ ನಡೆದಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆ ನಡೆದ ತಕ್ಷಣ ಎರಡು ಕೋಮಿನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಗಲಾಟೆಯೂ ನಡೆದಿತ್ತು. ಆದರೆ ಇದೀಗ ಬಂಧನದೊಂದಿಗೆ ಪ್ರಕರಣಕ್ಕೆ ಸ್ಪಷ್ಟ ತಿರುವು ಸಿಕ್ಕಿದ್ದು, ಕೋಮುಗಲಭೆ ಕೋನದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಿಖರ ಹಿನ್ನೆಲೆ ಹಾಗೂ ಉದ್ದೇಶ ಪತ್ತೆಹಚ್ಚುವ ಕಾರ್ಯ ಚುರುಕುಗೊಂಡಿದೆ.