ಡೈಲಿ ವಾರ್ತೆ: ಫೆ./23/2026

ಆನ್‌ಲೈನ್ ಟಾಸ್ಕ್ ಲಾಭದ ಆಮಿಷಕ್ಕೆ ಬಲಿಯಾದ ಯುವಕ: ಕುಂದಾಪುರದಲ್ಲಿ ₹5.39 ಲಕ್ಷ ಸೈಬರ್ ವಂಚನೆ

ಕುಂದಾಪುರ: ಆನ್‌ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಯುವಕನೊಬ್ಬರಿಂದ ₹5,39,200 ಹಣ ವಂಚಿಸಿರುವ ಸೈಬರ್ ಮೋಸ ಪ್ರಕರಣ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.

ದೂರುದಾರ ಪರಶುರಾಮ್ ಲಮಾಣಿ (29), ಕಾಗಿಹಾಳೆ ತಾಂಡೆ, ಸವದತ್ತಿ, ಬೆಳಗಾವಿ ನಿವಾಸಿ. ಇವರಿಗೆ ದಿನಾಂಕ 18-02-2026 ರಂದು ‘ಕಾವೇರಿ’ ಎಂಬವರು ಕರೆ ಮಾಡಿ https://alliidy.com� ಎಂಬ ಲಿಂಕ್ ಕ್ಲಿಕ್ ಮಾಡಿ ಟಾಸ್ಕ್‌ನಲ್ಲಿ ಭಾಗವಹಿಸಿದರೆ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ತಾನೂ ಲಾಭ ಪಡೆದಿದ್ದಾಗಿ ತಿಳಿಸಿ, ಪಿರ್ಯಾದಿದಾರರನ್ನೂ ಇನ್ವೆಸ್ಟ್ ಮಾಡಲು ಪ್ರೇರೇಪಿಸಿದ್ದಾರೆ.

ಇದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 19-02-2026 ರಂದು ₹2,00,000 ಹಣವನ್ನು RTGS ಮೂಲಕ ಗುಲಾಮ್ ಹುಸೈನ್ ಎಂಬವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ನಂತರ 20-02-2026 ರಂದು ₹2,40,000 ಹಣವನ್ನು ಮೋನು ಯಾದವ್ ಎಂಬವರ ಖಾತೆಗೆ ಮತ್ತು ಅದೇ ದಿನ ₹99,200 ಹಣವನ್ನು ಕುಲದೀಪ್ ಎಂಬವರ ಖಾತೆಗೆ RTGS ಮೂಲಕ ಜಮಾ ಮಾಡಿದ್ದಾರೆ.
ಈ ರೀತಿಯಾಗಿ ಒಟ್ಟು ₹5,39,200 ಹಣವನ್ನು ಹೂಡಿಕೆ ಮಾಡಿದರೂ ಯಾವುದೇ ಲಾಭ ಅಥವಾ ಅಸಲಿ ಹಣ ಮರಳಿ ದೊರಕದೆ, ಸೈಬರ್ ವಂಚಕರು ಹಣ ಪಡೆದುಕೊಂಡಿರುವುದು ತಿಳಿದುಬಂದಿದೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2026 ಕಲಂ 318(4) BNS ಹಾಗೂ 66(C), 66(D) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಆನ್‌ಲೈನ್ ಲಾಭದ ಆಮಿಷಗಳಿಗೆ ಒಳಗಾಗದೇ ಎಚ್ಚರಿಕೆಯಿಂದ ಇರಲು ಹಾಗೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸಲಹೆ ನೀಡಿದ್ದಾರೆ.