ಡೈಲಿ ವಾರ್ತೆ: ಫೆ./24/2026

ಅಪ್ರಾಪ್ತ ಬಾಲಕನಿಂದ ಬಲವಂತದಿಂದ ‘ದೇಶದ್ರೋಹ’
ಪ್ರಚೋದನಕಾರಿ ಘೋಷಣೆ ಕೂಗಿಸಿ ಚಿತ್ರೀಕರಣ: ಕಂಡ್ಲೂರಿನಲ್ಲಿ ಇಬ್ಬರ ಬಂಧನ:
ಸಾಮಾಜಿಕ ಜಾಲತಾಣದಲ್ಲಿ ಹಂಚಿದರೂ ಕಾನೂನು ಕ್ರಮದ ಎಚ್ಚರಿಕೆ

ಕುಂದಾಪುರ, ಫೆ.24 : ಉತ್ತರ ಭಾರತದ ಕೂಲಿ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕನಿಂದ ಬಲವಂತವಾಗಿ ದೇಶದ್ರೋಹದ ಹೇಳಿಕೆ ದಾಖಲಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚೋದನೆ ನೀಡಿದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಂಡ್ಲೂರಿನ ಹೇರ್‌ಡ್ರೆಸ್ ಅಂಗಡಿ ಮಾಲೀಕ ಶಶಾಂಕ್ ಹಾಗೂ ಪ್ರಮೋದ್ ಎಂದು ಗುರುತಿಸಲಾಗಿದೆ. ಈ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರಿನಲ್ಲಿ ನಡೆದಿದ್ದು, ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ, ಆರೋಪಿ ಶಶಾಂಕ್ ತನ್ನ ಮೇಲೆಯೂ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು, ಅದರಂತೆಯೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋ ಹಂಚಿದರೆ ಕಠಿಣ ಕ್ರಮ: ಎಸ್‌ಪಿ ಎಚ್ಚರಿಕೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್‌ಡ್ರೆಸ್ ಅಂಗಡಿಯಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ, ಸಾರ್ವಜನಿಕರು ಆ ವಿಡಿಯೋವನ್ನು ಶೇರ್ ಮಾಡುವುದಾಗಲಿ, ಮರುಪೋಸ್ಟ್ ಮಾಡುವುದಾಗಲಿ ಮಾಡಬಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋವನ್ನು ಹಂಚುವ ಅಥವಾ ಪ್ರಸಾರ ಮಾಡುವವರ ವಿರುದ್ಧ ಐಟಿ ಕಾಯ್ದೆ, ಜುವೆನೈಲ್ ಜಸ್ಟಿಸ್ ಕಾಯ್ದೆ ಹಾಗೂ ಇತರೆ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಅಪ್ರಾಪ್ತ ಬಾಲಕನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.