

ಡೈಲಿ ವಾರ್ತೆ: ಮಾ./01/2026

ಮೂಡುಗೋಪಾಡಿ ರಿಫಾಯೀ ಜುಮ್ಮಾ ಮಸ್ಜಿದ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ:
ಮನುಷ್ಯತ್ವವೇ ಧರ್ಮದ ಅಡಿಪಾಯ: ಸೌಹಾರ್ದತೆಯೇ ಬದುಕಿನ ಯಶಸ್ಸು – ಜಾನ್ ಡಿಸೋಜಾ

ಮೂಡುಗೋಪಾಡಿ: “ಜಗತ್ತಿನ ಎಲ್ಲಾ ಧರ್ಮಗ್ರಂಥಗಳು ಮನುಷ್ಯನನ್ನು ಮೊದಲು ಮನುಷ್ಯನನ್ನಾಗಿ ರೂಪಿಸಲು ಶ್ರಮಿಸುತ್ತವೆ. ನಾವು ಮನುಷ್ಯತ್ವವನ್ನು ಮರೆತು ವಿಕೃತಿಯತ್ತ ಸಾಗಿದಾಗ ಪ್ರಕೃತಿಯೇ ನಮಗೆ ಎಚ್ಚರಿಕೆ ನೀಡುತ್ತದೆ. ಆದ್ದರಿಂದ ಅಹಂಕಾರ ತೊರೆದು ಸಾಮರಸ್ಯದಿಂದ ಬದುಕುವುದು ಇಂದಿನ ಅಗತ್ಯ,” ಎಂದು ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಹೇಳಿದರು.

ಅವರು ಫೆಬ್ರವರಿ 28ರಂದು ಶನಿವಾರ ಮೂಡುಗೋಪಾಡಿ ರಿಫಾಯೀ ಜುಮ್ಮಾ ಮಸ್ಜಿದ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಗ್ರ್ಯಾಂಡ್ ಸೌಹಾರ್ದ ಇಫ್ತಾರ್ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಧರ್ಮಗಳು ಹುಟ್ಟಿರುವುದು ಮನುಷ್ಯರನ್ನು ರಾಕ್ಷಸರನ್ನಾಗಿ ಮಾಡಲಿಕ್ಕಲ್ಲ, ಬದಲಾಗಿ ಅವರಲ್ಲಿರುವ ಮಾನವೀಯತೆಯನ್ನು ಜಾಗೃತಗೊಳಿಸಲು. ಇಸ್ಲಾಂ, ಕ್ರೈಸ್ತ, ಹಿಂದೂ ಅಥವಾ ಬೌದ್ಧ ಯಾವುದೇ ಧರ್ಮವಿರಲಿ, ಅವುಗಳ ಮೂಲ ಉದ್ದೇಶ ಶಾಂತಿ ಮತ್ತು ಪ್ರೀತಿಯನ್ನು ಬಿತ್ತುವುದಾಗಿದೆ. ಪ್ರವಾದಿ ಮಹಮ್ಮದ್ ಪೈಗಂಬರರು ಜಗತ್ತಿಗೆ ನೀಡಿದ ಮಾನವ ಪ್ರೇಮದ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉಪವಾಸವು ಕೇವಲ ಧಾರ್ಮಿಕ ವಿಧಿಯಲ್ಲ, ಅದು ದೇಹದ ಆರೋಗ್ಯ ಹಾಗೂ ಆತ್ಮಶುದ್ಧಿಯ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸೌಹಾರ್ದತೆಯೇ ಕುಂದಾಪುರದ ಶಕ್ತಿ: ಮಲ್ಯಾಡಿ ಶಿವರಾಮ ಶೆಟ್ಟಿ

ಇನ್ನೋರ್ವ ಮುಖ್ಯ ಅತಿಥಿ, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, “ಮೂಡುಗೋಪಾಡಿ ಪರಿಸರದಲ್ಲಿ ದಶಕಗಳಿಂದಲೂ ಸೌಹಾರ್ದತೆ ನೆಲೆಸಿದೆ. ಪ್ರತಿಯೊಬ್ಬರಿಗೂ ಅವರವರ ದೈವದ ಮೇಲೆ ಅಪಾರ ನಂಬಿಕೆಯಿರುತ್ತದೆ, ಆ ನಂಬಿಕೆಯೇ ಬದುಕಿಗೆ ದಾರಿದೀಪ. ನಮ್ಮ ಹಬ್ಬಗಳಲ್ಲಿ ಮುಸ್ಲಿಂ ಬಾಂಧವರು ಹಾಗೂ ಅವರ ಕಾರ್ಯಕ್ರಮಗಳಲ್ಲಿ ನಾವು ಪಾಲ್ಗೊಳ್ಳುವ ಮೂಲಕ ಸಹೋದರತ್ವವನ್ನು ಎತ್ತಿ ಹಿಡಿಯುತ್ತಿದ್ದೇವೆ. ದೇವರು ಒಬ್ಬನೇ ಎಂಬ ತತ್ವದಡಿ ಎಲ್ಲರೂ ಒಟ್ಟಾಗಿ ಸಮಾಜದ ಏಳಿಗೆಗಾಗಿ ಶ್ರಮಿಸೋಣ,” ಎಂದರು.
ಸರ್ವ ಜನಾಂಗದ ಶಾಂತಿಯ ತೋಟ: ಖತೀಬರಾದ ರಮೀಝ್ ಜೌಹರಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಆರ್‌ಜೆಎಂ ಮೂಡುಗೋಪಾಡಿ ಖತೀಬರಾದ ರಮೀಝ್ ಜೌಹರಿ ಮಾತನಾಡಿ, “ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ನಾವು ಸೇವಿಸುವ ಅನ್ನಕ್ಕೆ ಜಾತಿಯಿಲ್ಲ, ಅದರ ಹಿಂದೆ ಹತ್ತಾರು ಧರ್ಮದವರ ಶ್ರಮವಿದೆ. ಅನ್ನಕ್ಕಿಲ್ಲದ ಜಾತಿ ನಮಗೇಕೆ? ‘ನೀನು ಮೊದಲು ಮಾನವನಾಗು’ ಎಂಬ ಸಿದ್ಧಯ್ಯ ಪುರಾಣಿಕರ ಸಾಲುಗಳಂತೆ ನಾವು ಬದುಕಬೇಕು. ಇಸ್ಲಾಂ ಸ್ತ್ರೀ ಕುಲಕ್ಕೆ ಅತ್ಯಂತ ಉನ್ನತ ಸ್ಥಾನಮಾನ ನೀಡಿದೆ,” ಎಂದು ತಿಳಿಸಿದರು.
ಜಾಗತಿಕ ಶಾಂತಿಯೇ ಮನುಕುಲದ ಉಳಿವಿಗೆ ಮಾರ್ಗ:ಎಂ ಎ ಗಫೂರ್

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್ ಮಾತನಾಡಿ
ಜಗತ್ತಿನಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಈ ಸಂದರ್ಭದಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯಗಳೇ ಸುಂದರ ಬದುಕಿಗೆ ಆಧಾರವಾಗಿದೆ.
ಇಸ್ರೇಲ್ – ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಗಲ್ಫ್ ರಾಷ್ಟ್ರಗಳ ಅಸ್ಥಿರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಬಲ ರಾಷ್ಟ್ರಗಳು ಯುದ್ಧಕ್ಕೆ ಬದಲಾಗಿ ಶಾಂತಿಗೆ ಒತ್ತು ನೀಡಬೇಕು ಎಂದರು.
ಭಾರತವು ಜಾಗತಿಕ ಸಂಘರ್ಷಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ ಅವರು, “ಸರ್ವೇ ಜನೋ ಸುಖಿನೋ ಭವಂತು” ಹಾಗೂ “ವಸುದೈವ ಕುಟುಂಬಕಂ” ಸಂದೇಶದಂತೆ ಮಾನವೀಯ ನೆಲೆಯಲ್ಲಿ ಬದುಕುವುದು ನಿಜವಾದ ಧರ್ಮ ಎಂದು ಅಭಿಪ್ರಾಯಪಟ್ಟರು.

ಆರ್‌ಜೆಎಂ ಮೂಡುಗೋಪಾಡಿ ಇದರ ಅಧ್ಯಕ್ಷರಾದ ಬಿ. ಎಂ. ಹಂಝ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧಾಕರ್ ನಂಬಿಯಾರ್, ಪತ್ರಕರ್ತ ಕೆ. ಸಿ. ರಾಜೇಶ್, ರಮೇಶ್ ಶೆಟ್ಟಿ ವಕ್ವಾಡಿ, ಆರ್‌ಜೆಎಂ ಗೌರವಾಧ್ಯಕ್ಷ ಜಿ. ಮುಹಮ್ಮದ್, ಬಿ. ಎ. ಮೊಹಮ್ಮದ್ ಹಾಜಿ ಮತ್ತಿತರರು ಪಾಲ್ಗೊಂಡು ಶುಭ ಹಾರೈಸಿದರು.








ನಾಸೀರ್ ಕಟ್ಕೆರೆ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಬಿ. ಎಂ. ನಾಸಿರ್ ವಂದಿಸಿದರು. ವಿವಿಧ ಧಾರ್ಮಿಕ ಗುರುಗಳು, ರಾಜಕೀಯ ಮುಖಂಡರು ಹಾಗೂ ಮಸೀದಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.