

ಡೈಲಿ ವಾರ್ತೆ: ಮಾ./01/2026

ವಂಡಾರಿನ ಯುವ ಉದ್ಯಮಿ ಸಂಪತ್ ಕುಮಾರ್ ಶೆಟ್ಟಿಗೆ ‘ವಿಜಯರತ್ನ ಇಂಟರ್ನ್ಯಾಷನಲ್ ಪ್ರಶಸ್ತಿ – 2026’ರ ಗೌರವ

ದುಬೈ, ಮಾರ್ಚ್ 1: ವಂಡಾರಿನ ಯುವ ಉದ್ಯಮಿ ಶ್ರೀಯುತ ಸಂಪತ್ ಕುಮಾರ್ ಶೆಟ್ಟಿಯವರಿಗೆ ಈ ಬಾರಿಯ ‘ವಿಜಯರತ್ನ ಇಂಟರ್ನ್ಯಾಷನಲ್ ಪ್ರಶಸ್ತಿ 2026’ ನೀಡಿ ಗೌರವಿಸಲಾಯಿತು.
ಶನಿವಾರ ಸಂಜೆ ದುಬೈನಲ್ಲಿ ನಡೆದ ಭವ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕ್ಯಾಶು ಉದ್ಯಮ ಆರಂಭಿಸಿ ಅಲ್ಪಾವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಪತ್ ಕುಮಾರ್ ಶೆಟ್ಟಿಯವರು ಸಾವಿರಾರು ಬಡ ಮತ್ತು ಕನಿಷ್ಠ ಶಿಕ್ಷಣ ಹೊಂದಿರುವ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ವಂಡಾರು ಮತ್ತು ಬ್ರಹ್ಮಾವರ ಪ್ರದೇಶಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಅವರ ಸಂಸ್ಥೆಯಲ್ಲಿ ಉದ್ಯೋಗ ಹೊಂದಿದ್ದಾರೆ.
ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಕಲ್ಯಾಣಕ್ಕೂ ಅವರು ವಿಶೇಷ ಆದ್ಯತೆ ನೀಡಿದ್ದು, ನೂರಕ್ಕೂ ಹೆಚ್ಚು ಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಕಾರ್ಮಿಕರ ಆರೋಗ್ಯ ಭದ್ರತೆಗೆ ಹೆಚ್ಚಿನ ಒತ್ತು ನೀಡಿ, ESI ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಸಾಮಾಜಿಕ ಕಳಕಳಿ ಮತ್ತು ಉದ್ಯಮಶೀಲತೆಯ ಸಮನ್ವಯದ ಮೂಲಕ ಮಾದರಿ ಉದ್ಯಮಿಯಾಗಿ ಹೊರಹೊಮ್ಮಿರುವ ಸಂಪತ್ ಕುಮಾರ್ ಶೆಟ್ಟಿಯವರಿಗೆ ದೊರೆತ ಈ ಪ್ರಶಸ್ತಿ ವಂಡಾರು ಹಾಗೂ ಬ್ರಹ್ಮಾವರ ಪ್ರದೇಶದ ಜನತೆಗೆ ಹೆಮ್ಮೆ ತಂದಿದೆ.