ಡೈಲಿ ವಾರ್ತೆ: ಮಾ./03/2026

ಬಡವರ ನಿವೇಶನಕ್ಕೆ ಜಾಗವಿಲ್ಲ, ಕೋಣಗಳ ಓಟಕ್ಕೆ ಎಕರೆಗಟ್ಟಲೆ ಭೂಮಿಯೇ?: ಜಿಲ್ಲಾಡಳಿತದ ವಿರುದ್ಧ ಸುಂದರ ಮಾಸ್ತರ್ ಕಿಡಿ

​ಉಡುಪಿ: ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನಿವೇಶನರಹಿತರಾಗಿ ಬಡವರು ಕಣ್ಣೀರಿನ ಬದುಕು ಸಾಗಿಸುತ್ತಿದ್ದರೂ, ಅವರ ನೋವಿಗೆ ಸ್ಪಂದಿಸದ ಜನಪ್ರತಿನಿಧಿಗಳು ಈಗ ಕಂಬಳದ ಹೆಸರಿನಲ್ಲಿ ಭೂಮಿಗಾಗಿ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸ್ವಪ್ರತಿಷ್ಠೆಯ ಪ್ರದರ್ಶನಕ್ಕೆ ಸರ್ಕಾರಿ ಭೂಮಿ ಹಂಚಿಕೆ?
​”ಕಂಬಳ ಎನ್ನುವುದು ಕೆಲವು ಕುಟುಂಬಗಳ ವೈಯಕ್ತಿಕ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮವಲ್ಲ. ಕಂಬಳಕ್ಕೆ ಜಿಲ್ಲಾಡಳಿತದ ಶೀರ್ಷಿಕೆ ನೀಡಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣ ಖರ್ಚು ಮಾಡುತ್ತಿರುವುದು ವ್ಯವಸ್ಥಿತ ಸಂಚು. ಈಗ ಕಂಬಳಕ್ಕೆ ಜಾಗ ಕಾಯ್ದಿರಿಸಿ, ಮುಂದಿನ ದಿನಗಳಲ್ಲಿ ಅಲ್ಲಿ ರೆಸಾರ್ಟ್ ತೆರೆಯುವ ಹುನ್ನಾರ ಇದರ ಹಿಂದೆ ಅಡಗಿದೆ,” ಎಂದು ಅವರು ಗಂಭೀರ ಆರೋಪ ಮಾಡಿದರು.

​ದೈವಸ್ಥಾನಗಳಿಗೂ ಭೂಮಿ ಮಂಜೂರು ಮಾಡುವಿರಾ?

​ಬೌದ್ಧಿಕವಾಗಿ ಪ್ರಶ್ನಿಸಿದ ಸುಂದರ ಮಾಸ್ತರ್, “ಕಂಬಳಕ್ಕೆ 6.30 ಎಕರೆ ಭೂಮಿ ಕಾಯ್ದಿರಿಸಿದಂತೆ, ಕರಾವಳಿಯ ಆರಾಧ್ಯ ದೈವವಾದ ಬಬ್ಬುಸ್ವಾಮಿ ದೈವಸ್ಥಾನಗಳ ಕೋಲ ಮತ್ತು ನೇಮೋತ್ಸವಕ್ಕೆ ತಲಾ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿಸಲು ಈಗ ಗುದ್ದಲಿ ಪೂಜೆ ನಡೆಸಿದ ಜನಪ್ರತಿನಿಧಿಗಳು ಸಿದ್ಧರಿದ್ದಾರೆಯೇ? ಮೋಜು ಮಸ್ತಿಗೆ ಮಣೆ ಹಾಕುವ ಜಿಲ್ಲಾಡಳಿತ, ಮುಂದೊಂದು ದಿನ ಕೋಳಿ ಅಂಕಕ್ಕೂ ನಿವೇಶನ ಕೇಳಿದರೆ ಕೊಡುತ್ತದೆಯೇ?” ಎಂದು ಪ್ರಶ್ನಿಸಿದರು.

​ಬಡವರ ವಿರೋಧಿ ನೀತಿಗೆ ಆಕ್ರೋಶ:

​80 ಬಡಗುಬೆಟ್ಟು ಗ್ರಾಮದ ಸರ್ವೆ ನಂಬರ್ 11/1 ರಲ್ಲಿ 6.30 ಎಕರೆ ಭೂಮಿಯನ್ನು ಕಂಬಳಕ್ಕೆ ಮೀಸಲಿಟ್ಟಿರುವುದು ಜನವಿರೋಧಿ ನೀತಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಲಕ್ಷಾಂತರ ಬಡವರು ಸ್ವಂತ ನಿವೇಶನವಿಲ್ಲದೆ ಪರದಾಡುತ್ತಿದ್ದಾರೆ. ಬಡವರು ಭೂಮಿಗಾಗಿ ಅರ್ಜಿ ಹಾಕಿದಾಗ ‘ಜಾಗ ಲಭ್ಯವಿಲ್ಲ’ ಎಂದು ಹಾರಿಕೆ ಉತ್ತರ ನೀಡುವ ಅಧಿಕಾರಿಗಳು, ಈಗ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಅಕ್ಷಮ್ಯ ಎಂದು ಅವರು ಹರಿಹಾಯ್ದರು.

  • ​”ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕಂಬಳದ ವಿಚಾರದಲ್ಲಿ ಗುದ್ದಲಿ ಪೂಜೆ ನಡೆಸಲು ಪೈಪೋಟಿ ನಡೆಸುತ್ತಿರುವುದು ಹಾಸ್ಯಾಸ್ಪದ. ಜಿಲ್ಲಾಡಳಿತವು ರಾಜಕಾರಣಿಗಳ ಗುಲಾಮರಂತೆ ವರ್ತಿಸುವುದನ್ನು ಬಿಟ್ಟು, ನಿವೇಶನ ರಹಿತ ಬಡವರಿಗೆ ಭೂಮಿ ಮಂಜೂರು ಮಾಡಲು ಆದ್ಯತೆ ನೀಡಬೇಕು ಎಂದು ಸುಂದರ ಮಾಸ್ತರ್ ಹೇಳಿದರು.

​ಹೋರಾಟದ ಎಚ್ಚರಿಕೆ:
​ಲಭ್ಯವಿರುವ ಸರ್ಕಾರಿ ಭೂಮಿಯನ್ನು ಬಡವರ ವಸತಿ ಯೋಜನೆಗೆ ಬಳಸದೆ, ಕೇವಲ ಶ್ರೀಮಂತರ ಮೋಜಿನ ಕ್ರೀಡೆಗೆ ಮಂಜೂರು ಮಾಡಿದರೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯು ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.