ಡೈಲಿ ವಾರ್ತೆ: ಮಾ./03/2026

ಸಿಲಿಕಾನ್ ಸಿಟಿಯಲ್ಲಿ ಹಸಿರು ವಾಹನದ ಹೆಸರಲ್ಲಿ ಭಾರಿ ದೋಖಾ: 3,250 ಗ್ರಾಹಕರಿಗೆ 35 ಕೋಟಿ ರೂ. ವಂಚನೆ!

​ಬೆಂಗಳೂರು: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬೈಕ್ ಕೊಡಿಸುವುದಾಗಿ ನಂಬಿಸಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬೃಹತ್ ಜಾಲವೊಂದು ಬಯಲಾಗಿದೆ.

‘ಆಪ್ಕಿ ಇವಿ’ (Aapki EV) ಶೋರೂಂ ಮಾಲೀಕರು ಸಬ್ಸಿಡಿಯ ಆಸೆ ತೋರಿಸಿ ಸಾಮಾನ್ಯ ಜನರನ್ನು ಸಾಲದ ಸುಳಿಗೆ ಸಿಲುಕಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
​ಕೇವಲ 20,000 ರೂ. ಮುಂಗಡ ಹಣ ಪಾವತಿಸಿದರೆ ಸಾಕು, ಉಳಿದ ಮೊತ್ತ ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಜಮೆಯಾಗುತ್ತದೆ ಎಂದು ಶೋರೂಂ ಮಾಲೀಕರು ಗ್ರಾಹಕರನ್ನು ನಂಬಿಸಿದ್ದರು. ಬೈಕ್ ನೋಂದಣಿ ಪ್ರಕ್ರಿಯೆಗಾಗಿ ಗ್ರಾಹಕರಿಂದ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಪಡೆದಿದ್ದ ಆರೋಪಿಗಳು, ಆ ದಾಖಲೆಗಳನ್ನು ಬಳಸಿಕೊಂಡು ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ.

ಮಾರುಕಟ್ಟೆಯಲ್ಲಿ ಕೇವಲ 35,000 ರೂ. ಬೆಲೆಬಾಳುವ ಇವಿ ಬೈಕ್‌ಗೆ ಬರೋಬ್ಬರಿ 1.50 ಲಕ್ಷ ರೂ. ಸಾಲ ಮಾಡಿಸಲಾಗಿದೆ. ಗ್ರಾಹಕರ ಅನುಮತಿ ಅಥವಾ ಸಹಿ ಇಲ್ಲದೆಯೇ ಸಾಲ ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವಂಚನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಕೇಳಿಬಂದಿದೆ.

​ಸಂಕಷ್ಟದಲ್ಲಿ ಗ್ರಾಹಕರು: ಸುಮಾರು 3,250ಕ್ಕೂ ಹೆಚ್ಚು ಜನ ಈಗ ತಮ್ಮ ಹೆಸರಿನಲ್ಲಿರುವ ಲಕ್ಷಾಂತರ ರೂಪಾಯಿ ಸಾಲವನ್ನು ಕಂಡು ಕಂಗಾಲಾಗಿದ್ದಾರೆ.

​ಬೃಹತ್ ಪ್ರತಿಭಟನೆ ಮತ್ತು ಆಕ್ರೋಶ

​ತಮಗೆ ಆಗಿರುವ ಅನ್ಯಾಯದ ವಿರುದ್ಧ ಸಿಡಿದೆದ್ದ 500ಕ್ಕೂ ಹೆಚ್ಚು ಗ್ರಾಹಕರು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆಯವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು. ವಂಚನೆಯ ಸೂತ್ರಧಾರಿಗಳಾದ ರವಿ ಮತ್ತು ಹನುಮಂತರಾಜು ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ತಮಗೆ ನ್ಯಾಯ ಕೊಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
​ಪೊಲೀಸ್ ಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಾಗಲಗುಂಟೆ ಠಾಣಾಧಿಕಾರಿಗಳು, “ತನಿಖೆ ಪ್ರಗತಿಯಲ್ಲಿದೆ, ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.