

ಡೈಲಿ ವಾರ್ತೆ: ಮಾ./05/2026

ಯುದ್ಧದ ನೆಪವೊಡ್ಡಿ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಹಗಲು ದರೋಡೆ: ಬೆಲೆ ಏರಿಕೆ ನೆಪದಲ್ಲಿ ಗ್ರಾಹಕರ ಸುಲಿಗೆಗೆ ಎಸ್‌ಡಿಟಿಯು ಆಕ್ರೋಶ,ಪ್ರತಿಭಟನೆ ಎಚ್ಚರಿಕೆ!

ಮಂಗಳೂರು, ಮಾಚ್ 5: ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಜಿಲ್ಲೆಯ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಅಕ್ರಮವಾಗಿ ದರ ಹೆಚ್ಚಳ ಮಾಡಿ ಗ್ರಾಹಕರನ್ನು ಲೂಟಿ ಮಾಡಲಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ನಗರ ಜಿಲ್ಲಾ ಸಮಿತಿ ಗಂಭೀರವಾಗಿ ಆರೋಪಿಸಿದೆ.
ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದಾಗಿ ತೈಲ ಸರಬರಾಜಿನಲ್ಲಿ ಕೊರತೆಯಾಗಿದೆ ಎಂಬ ಸುಳ್ಳು ಕಾರಣಗಳನ್ನು ನೀಡಿ, ಗ್ಯಾಸ್ ಪಂಪ್ ವಿತರಕರು ತಾವೇ ಇಚ್ಛಿಸಿದ ದರವನ್ನು ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಾಲಕರು ಮತ್ತು ವಿತರಕರ ನಡುವೆ ನಡೆದಿರುವ ವಾಗ್ವಾದದ ವೀಡಿಯೊಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸರಕಾರದ ಆದೇಶವಿಲ್ಲದೆ ದರ ಹೆಚ್ಚಳ:
ಸರಕಾರದಿಂದ ಯಾವುದೇ ಅಧಿಕೃತ ಬೆಲೆ ಏರಿಕೆಯ ಆದೇಶ ಹೊರಬೀಳದಿದ್ದರೂ, ಕೆಲವು ಪಂಪ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ. ಈ ಹಿಂದೆ ಕೂಡ ದರ ಪರಿಷ್ಕರಣೆಯಾದಾಗ ಹಳೆಯ ದರವನ್ನೇ ಮುಂದುವರಿಸಿ ಗ್ರಾಹಕರಿಂದ ಹಣ ಲೂಟಿ ಮಾಡಿದ ಇತಿಹಾಸ ಇಂತಹ ಪಂಪ್‌ಗಳಿಗಿದೆ ಎಂದು SDTU ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ಕಿಡಿಕಾರಿದ್ದಾರೆ.
SDTU ಎಚ್ಚರಿಕೆ ಮತ್ತು ಆಗ್ರಹ:
ಈ ಹಗರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಅಕ್ರಮ ಎಸಗುತ್ತಿರುವ ಗ್ಯಾಸ್ ಪಂಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇರ್ಫಾನ್ ಕಾನ ಆಗ್ರಹಿಸಿದ್ದಾರೆ. ಒಂದು ವೇಳೆ ಈ ದೋಚುವಿಕೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
”ಜಿಲ್ಲಾಧಿಕಾರಿಯವರು ದರ ಪರಿಷ್ಕರಣೆಯಾದ ಸಂದರ್ಭದಲ್ಲಿ ಕೇವಲ ಸುತ್ತೋಲೆಗೆ ಸೀಮಿತವಾಗದೆ, ಮಾಧ್ಯಮಗಳ ಮೂಲಕ ಅಧಿಕೃತ ಪ್ರಕಟಣೆ ನೀಡಬೇಕು. ಇದರಿಂದ ಗ್ರಾಹಕರಿಗೆ ನಿಖರವಾದ ದರದ ಮಾಹಿತಿ ಲಭ್ಯವಾಗಿ ಲೂಟಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸ್ದಟು ಉಪಾಧ್ಯಕ್ಷರಾದ ಇರ್ಫಾನ್ ಕಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.