ಡೈಲಿ ವಾರ್ತೆ: ಮಾ./05/2026

ಕುಂದಾಪುರ| ಕರಾವಳಿ ಕಾಂಗ್ರೆಸ್‌ನಲ್ಲಿ ‘ಕುರ್ಚಿ’ ಕಸರತ್ತು: ಹೊಸ ಅಧ್ಯಕ್ಷರ ಆಯ್ಕೆಗೆ 24 ಗಂಟೆಯಲ್ಲೇ ತಡೆ – ಹಿರಿಯರ ಹಠಕ್ಕೆ ಕಾರ್ಯಕರ್ತರು ಬಲಿ?

​ಕುಂದಾಪುರ/ಕೋಟ: ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಪಕ್ಷ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕರಾವಳಿಯಲ್ಲಿ ಮಾತ್ರ ಸಂಘಟನೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಪೂರಕವೆಂಬಂತೆ, ಇತ್ತೀಚೆಗೆ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ನಡೆದ ‘ಹೈಡ್ರಾಮಾ’ ಪಕ್ಷದ ಆಂತರಿಕ ಭಿನ್ನಮತವನ್ನು ಬೀದಿಗೆ ತಂದಿದೆ.

​ಅಧಿಕಾರಕ್ಕೆ ಅಂಟಿಕೊಂಡ ಹಿರಿಯರಾದ
​ಪ್ರತಾಪ್ ಚಂದ್ರ ಶೆಟ್ಟಿ, ಮನೋರಮಾ ಮಧ್ವರಾಜ್, ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿಯವರಂತಹ ದೈತ್ಯ ನಾಯಕರು ಪ್ರತಿನಿಧಿಸುತ್ತಿದ್ದ ಈ ಭಾಗದಲ್ಲಿ ಇಂದು ಕಾಂಗ್ರೆಸ್ ವರ್ಚಸ್ಸು ಕಳೆದುಕೊಂಡು ಎರಡು ದಶಕಗಳೇ ಕಳೆದಿವೆ. ಹಿರಿಯ ನಾಯಕರಿಗೆ ವಯಸ್ಸಾದರೂ ‘ಕುರ್ಚಿ’ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಪಕ್ಷ ಸಂಘಟನೆಗಿಂತ ಸ್ವ-ಅಭಿವೃದ್ಧಿಗೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪ ಕಾರ್ಯಕರ್ತ ವಲಯದಲ್ಲಿ ಬಲವಾಗಿದೆ.

​ಬಿಜೆಪಿ ಮಾದರಿ ಸಂಘಟನೆ ಕಾಂಗ್ರೆಸ್‌ಗೆ ಮರೀಚಿಕೆ?

​ಬಿಜೆಪಿಯಲ್ಲಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಬದಲಾವಣೆ ತಂದು ಯುವಕರಿಗೆ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು ಜೀವಂತವಾಗಿರಿಸಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕುಂದಾಪುರ ಬ್ಲಾಕ್ ಅಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಸತತ ಮೂರು ಅವಧಿಗೆ ಅಧಿಕಾರದಲ್ಲಿದ್ದರೂ, ಅವರ ಅವಧಿಯಲ್ಲಿ ಶಾಸಕರಾಗಲಿ ಅಥವಾ ಪಂಚಾಯತ್ ಚುನಾವಣೆಯಾಗಲಿ ಗೆದ್ದ ದಾಖಲೆಗಳಿಲ್ಲ. ಇನ್ನು ಕೋಟ ಬ್ಲಾಕ್‌ನಲ್ಲಿ ಶಂಕರ್ ಕುಂದರ್ ಬರೋಬ್ಬರಿ 16 ವರ್ಷಗಳಿಂದ (6 ಬಾರಿ) ಅಧ್ಯಕ್ಷ ಗಾದಿಯಲ್ಲಿದ್ದಾರೆ.

​24 ಗಂಟೆಯಲ್ಲೇ ಅದಲು-ಬದಲು: ವಿಕಾಸ್ ಹೆಗ್ಡೆ ನೇಮಕಕ್ಕೆ ‘ತಡೆಯಾಜ್ಞೆ’!

​ಬುಧವಾರವಷ್ಟೇ ಕುಂದಾಪುರಕ್ಕೆ ವಿಕಾಸ್ ಹೆಗ್ಡೆ ಹಾಗೂ ಕೋಟ ಬ್ಲಾಕ್‌ಗೆ ತಿಮ್ಮ ಪೂಜಾರಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಕೇವಲ 24 ಗಂಟೆ ಕಳೆಯುವಷ್ಟರಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
​ಈ ತಡೆಗೆ ಕಾರಣವೇನು?
ಕೇಳಿ ಬರುತ್ತಿರುವ ಗುಸುಗುಸಿನ ಪ್ರಕಾರ, ಕುಂದಾಪುರದ ವಿಕಾಸ್ ಹೆಗ್ಡೆ ಅವರು ವಾರಾಹಿ ಹೋರಾಟದ ಸಂದರ್ಭದಲ್ಲಿ ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯವರ ಬದಲಾಗಿ ಗೋಪಾಲ ಪೂಜಾರಿಯವರೊಂದಿಗೆ ಕೈಜೋಡಿಸಿದ್ದರು. ಇದೇ ಕಾರಣಕ್ಕೆ ಹಿರಿಯ ನಾಯಕರು ವಿಕಾಸ್ ಹೆಗ್ಡೆ ಆಯ್ಕೆಗೆ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೋಟಾದಲ್ಲಿ ಶಂಕರ್ ಕುಂದರ್ ಅವರು ಪಕ್ಷಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸುವಂತಹ ಕಠಿಣ ಕೆಲಸ ಮಾಡಿದ್ದರೂ ಅವರಿಗೆ ಉನ್ನತ ಸ್ಥಾನ ನೀಡಿಲ್ಲ ಎಂಬ ನೋವು ಕಾರ್ಯಕರ್ತರಲ್ಲಿದೆ.

​ಕಾರ್ಯಕರ್ತರ ಗೋಳು ಕೇಳುವವರಾರು?

​ಒಟ್ಟಿನಲ್ಲಿ ನಾಯಕರ ಪ್ರತಿಷ್ಠೆ ಮತ್ತು ಹಿರಿಯ-ಕಿರಿಯರ ನಡುವಿನ ಶೀತಲ ಸಮರದಿಂದಾಗಿ ಕರಾವಳಿ ಕಾಂಗ್ರೆಸ್ ‘ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಸ್ಥಿತಿಗೆ ತಲುಪಿದೆ. ಯುವಕರಿಗೆ ಅವಕಾಶ ನೀಡದಿದ್ದರೆ ಮತ್ತು ಹಿರಿಯರು ಕುರ್ಚಿ ಬಿಟ್ಟು ಕೊಡದಿದ್ದರೆ ಕರಾವಳಿಯಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳುವುದು ಅಸಾಧ್ಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.