

ಡೈಲಿ ವಾರ್ತೆ: ಮಾ./05/2026

ಬೃಹತ್ ಮಾದಕ ಜಾಲ ಬೇಧಿಸಿದ ಮಂಗಳೂರು ಪೊಲೀಸರು: ದುಬೈ ಲಿಂಕ್ ಪತ್ತೆ, 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನೇ ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತರ್-ರಾಜ್ಯ ಡ್ರಗ್ಸ್ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಹಾಗೂ ಹೈಡ್ರೋ ವೀಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ 1: ಲಾಡ್ಜ್ ಮೇಲೆ ದಾಳಿ, ನಾಲ್ವರ ಬಂಧನ
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ರಸ್ತೆಯ ‘ಕ್ಲಾಸಿಕ್ ಕಂಫರ್ಟ್’ ಲಾಡ್ಜ್‌ನಲ್ಲಿ ಕುಳಿತು ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೊಹಮ್ಮದ್ ಸಯ್ಯದ್ ಆಫ್ರೀದಿ, ಅಹಮ್ಮದ್ ಅಲಿ ಅರ್ಷಾನ್, ಮಕ್ಸದ್ ಸಾಗ್ ಹಾಗೂ ಫೆಲಿಕ್ಸ್ ಪಿ. ಜೋಸೆಫ್ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳು ಬೆಂಗಳೂರಿನಿಂದ ಎಂ.ಜಿ. ಹೆಕ್ಟರ್ ವಾಹನದಲ್ಲಿ ಮಾದಕ ವಸ್ತುಗಳನ್ನು ಸಾಗಿಸಿ ತಂದಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ 2: ಮೈದಾನದಲ್ಲಿ ಡ್ರಗ್ಸ್ ಡೀಲ್ – ಇಬ್ಬರು ವಶಕ್ಕೆ
ಇನ್ನೊಂದು ಕಾರ್ಯಾಚರಣೆಯಲ್ಲಿ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಬಂದರ್ ಬಳಿಯ ಗ್ರೀನ್ ಪಾರ್ಕ್ ಮೈದಾನದಲ್ಲಿ ಸ್ವಿಫ್ಟ್ ಕಾರಿನಲ್ಲಿ ಕುಳಿತು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಸ್ರಾದೋ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯ ವೇಳೆ ಈ ಜಾಲದ ಹಿಂದಿರುವ ಅಂತರಾಷ್ಟ್ರೀಯ ಸಂಪರ್ಕ ಬೆಳಕಿಗೆ ಬಂದಿದೆ. ಮೂಲತಃ ಮುಂಬೈ ನಿವಾಸಿಯಾದ, ಪ್ರಸ್ತುತ ದುಬೈ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿರುವ ಸಂದೀಪ್ ಶೆಟ್ಟಿ ಈ ಜಾಲದ ಕಿಂಗ್‌ಪಿನ್ ಎನ್ನಲಾಗಿದೆ.
ಸಂದೀಪ್ ಶೆಟ್ಟಿ ದುಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಹೈಡ್ರೋ ವೀಡ್ ಸಾಗಾಟ ಮಾಡುತ್ತಿದ್ದ.
ಬೆಂಗಳೂರು ವಿಮಾನ ನಿಲ್ದಾಣದಿಂದ ಅದನ್ನು ಸ್ವೀಕರಿಸಿ ಸುರಕ್ಷಿತವಾಗಿ ಬೇರೆಡೆಗೆ ಸಾಗಿಸಲು ಎಡಲ್ ರೋಚ್‌ನನ್ನು ನೇಮಿಸಿದ್ದ. ನಂತರ ಎಡಲ್ ರೋಚ್ ಮತ್ತು ತಂಡವು ಈ ಮಾದಕ ವಸ್ತುವನ್ನು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ತಲುಪಿಸುತ್ತಿದ್ದರು.
ಪೊಲೀಸರು ಎರಡು ಕಾರ್ಯಾಚರಣೆಗಳಿಂದ
53.87 ಗ್ರಾಂ ಎಂಡಿಎಂಎ (MDMA)
ಒಟ್ಟು 163.20 ಗ್ರಾಂ ಹೈಡ್ರೋ ವೀಡ್ ಗಾಂಜಾ
1.155 ಕೆಜಿ ಸಾಮಾನ್ಯ ಗಾಂಜಾ
ಒಂದು MG Hector ಹಾಗೂ ಒಂದು Maruti Swift ಕಾರು. ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ:
ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 56/2026) ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 29/2026) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.