ಡೈಲಿ ವಾರ್ತೆ: ಮಾ./08/2026

ಅಡ್ರೆಸ್ ಕೇಳುವ ನೆಪದಲ್ಲಿ ಸರಗಳ್ಳತನ: ಮಾಗಡಿ ಪೊಲೀಸರ ಬಲೆಗೆ ಬಿದ್ದ ಲೇಡಿ ಗ್ಯಾಂಗ್‌!

​ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸರಣಿ ಸರಗಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳರ ತಂಡವನ್ನು ಮಾಗಡಿ ತಾಲೂಕಿನ ಕುದೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

​ಬಂಧಿತರನ್ನು ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 112 ಗ್ರಾಂ ತೂಕದ ಮೂರು ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವ್ಯಾಗನಾರ್ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

​ಕಳೆದ ಮಾರ್ಚ್ 3 ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಈ ಘಟನೆ ನಡೆದಿತ್ತು. ಅಂದು ಮುನೇಶ್ವರ ಸ್ವಾಮಿ ರಥೋತ್ಸವದ ಸಂಭ್ರಮವಿದ್ದ ಕಾರಣ ಭಕ್ತರ ಓಡಾಟ ಹೆಚ್ಚಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಕಾರಿನಲ್ಲಿ ಬಂದು ಭಕ್ತರ ಬಳಿ “ದೇವಸ್ಥಾನಕ್ಕೆ ದಾರಿ ಯಾವುದು?” ಎಂದು ಕೇಳುವ ನಟನೆ ಮಾಡಿದ್ದಾರೆ. ಭಕ್ತರು ದಾರಿ ತೋರಿಸುತ್ತಿದ್ದಂತೆಯೇ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು.

​ಒಂದೇ ದಿನ ಮೂರು ಕಡೆಗಳಲ್ಲಿ ಇಂತಹ ಕೃತ್ಯಗಳು ನಡೆದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಕುದೂರು ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಮಾಹಿತಿ ಮತ್ತು ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

​ವಂಚನೆಯ ಜಾಲ ಕೇವಲ ರಾಮನಗರ ಮಾತ್ರವಲ್ಲದೆ, ಈ ತಂಡ ಒಟ್ಟು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಮಹಿಳೆಯರೇ ದಾರಿ ಕೇಳಲು ಮುಂದೆ ಬರುತ್ತಿದ್ದರಿಂದ ಸಾರ್ವಜನಿಕರು ಶಂಕಿಸುತ್ತಿರಲಿಲ್ಲ. ಇದನ್ನೇ ಈ ಗ್ಯಾಂಗ್ ಲಾಭವಾಗಿ ಬಳಸಿಕೊಳ್ಳುತ್ತಿತ್ತು.
ಬಂಧಿತರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.