

ಡೈಲಿ ವಾರ್ತೆ: ಮಾ./08/2026

ಕೋಟ ಶ್ರೀ ಅಮೃತೇಶ್ವರಿ ದೇವಳದ ನಾಗಮಂಡಲೋತ್ಸವದ ಯಶಸ್ಸಿಗೆ ಶ್ರಮಿಸಿದ ಸ್ವಯಂಸೇವಕರಿಗೆ ‘ಮಿತ್ರ ಭೋಜನ’ ಹಾಗೂ ಸಸಿ ವಿತರಣೆ

ಕೋಟ: ಇಲ್ಲಿನ ಪರಮ ಪವಿತ್ರ ಕ್ಷೇತ್ರವಾದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವತಿಯಿಂದ ಮಾರ್ಚ್ 1 ರಂದು ಅತ್ಯಂತ ವೈಭವದಿಂದ ಜರುಗಿದ ‘ಏಕ ಪವಿತ್ರ ನಾಗಮಂಡಲೋತ್ಸವ’ದ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿದ ಸಾವಿರಾರು ಸ್ವಯಂಸೇವಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಮಾರ್ಚ್ 8 ರಂದು ದೇವಳದ ವತಿಯಿಂದ ‘ಮಿತ್ರ ಭೋಜನ’ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಭಿನಂದನಾ ಸಭೆಯನ್ನುದ್ದೇಶಿಸಿ ಮಾತನಾಡಿದ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ. ಕುಂದರ್ ಅವರು, ನಾಗಮಂಡಲೋತ್ಸವದ ಯಶಸ್ಸಿನ ಶ್ರೇಯಸ್ಸನ್ನು ಭಕ್ತ ಸಮೂಹಕ್ಕೆ ಅರ್ಪಿಸಿದರು. “14 ಗ್ರಾಮಗಳ ಭಕ್ತರು ಹಾಗೂ ದೇಶ-ವಿದೇಶಗಳಲ್ಲಿರುವ ಭಕ್ತರ ಅಪ್ರತಿಮ ಸಹಕಾರದಿಂದ ಈ ಧಾರ್ಮಿಕ ಕಾರ್ಯಕ್ರಮ ಇತಿಹಾಸ ಪುಟ ಸೇರುವಂತಾಗಿದೆ. 5 ಕೆಜಿ ಕಾಣಿಕೆಯಿಂದ ಹಿಡಿದು 50,000 ಕೆಜಿ ವಸ್ತುವಿನವರೆಗೆ, ಹಾಗೂ 5 ರೂಪಾಯಿಯಿಂದ ಹಿಡಿದು 5 ಲಕ್ಷದವರೆಗೆ ತನು-ಮನ-ಧನದಿಂದ ಸಹಕರಿಸಿದ ಪ್ರತಿಯೊಬ್ಬರೂ ಈ ಯಶಸ್ಸಿನ ಪಾಲುದಾರರು,” ಎಂದು ಮನಃಪೂರ್ವಕವಾಗಿ
ನುಡಿದರು.

ಪಾರ್ಕಿಂಗ್ ವ್ಯವಸ್ಥೆ, ಊಟದ ಚಪ್ಪರದಲ್ಲಿ ನೀರು ಪೂರೈಕೆ, ಎಲೆ ತೆಗೆಯುವ ಕೆಲಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಸ್ವಯಂಸೇವಕರು ತೋರಿದ ಶಿಸ್ತು ಮತ್ತು ಭಕ್ತಿ ಅನನ್ಯವಾದುದು ಎಂದು ಅವರು ಶ್ಲಾಘಿಸಿದರು.
ಹಸಿರು ನೆನಪಿನ ಕಾಣಿಕೆ:



ನಾಗಮಂಡಲೋತ್ಸವದ ಸವಿನೆನಪು ತಲೆಮಾರುಗಳ ಕಾಲ ಉಳಿಯಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಕಾರ್ಯಕರ್ತರಿಗೆ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. “ಇಂದು ನಾವು ನೀಡುತ್ತಿರುವ ಕಸಿ ಮಾಡಿದ ಮಾವು, ಹಲಸು ಹಾಗೂ ಹೂವಿನ ಗಿಡಗಳು ನಾಳೆ ಮರವಾಗಿ ಫಲ ನೀಡುವಾಗ, ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಇದು ‘ಅಮ್ಮನವರ ನಾಗಮಂಡಲದ ಪ್ರಸಾದ’ ಎಂದು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು. ಪ್ರಕೃತಿಯನ್ನು ಪೋಷಿಸುವ ಮೂಲಕ ನಾಗದೇವರಿಗೆ ಮತ್ತು ಅಮ್ಮನವರಿಗೆ ನಾವು ಸಲ್ಲಿಸುವ ನಿಜವಾದ ಸೇವೆ ಇದಾಗಿದೆ,” ಎಂದು ಆನಂದ್ ಕುಂದರ್ ತಿಳಿಸಿದರು.


ಕಾರ್ಯಕ್ರಮದಲ್ಲಿ ಮಧುಸೂದನ್ ಬಾಯರಿ ಅವರ ತಂಡದ ಧಾರ್ಮಿಕ ವಿಧಿವಿಧಾನಗಳ ಕೊಡುಗೆಯನ್ನು ಸ್ಮರಿಸಲಾಯಿತು. ಸುಮಾರು 2,000ಕ್ಕೂ ಅಧಿಕ ಕಾರ್ಯಕರ್ತರು ಈ ಸಹಭೋಜನದಲ್ಲಿ ಪಾಲ್ಗೊಂಡು ದೇವಿಯ ಪ್ರಸಾದ ಸ್ವೀಕರಿಸಿದರು. ದೇವಳದ ಸಿಬ್ಬಂದಿ ವರ್ಗ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಂದ್ರ ಆಚಾರಿ ಕೋಟ ಸ್ವಾಗತಿಸಿ ವಂದಿಸಿದರು.