

ಡೈಲಿ ವಾರ್ತೆ: ಮಾ./08/2026

ಬ್ರಹ್ಮಾವರ| ‘ಗರಗರ ಮಂಡಲ’ (ಜುಗಾರಿ ಅಡ್ಡೆಗೆ) ಪೊಲೀಸ್ ದಾಳಿ – 10 ಮಂದಿ ವಶಕ್ಕೆ

ಬ್ರಹ್ಮಾವರ: ತಾಲೂಕಿನ ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ‘ಗರಗರ ಮಂಡಲ’ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 07/03/2026 ರಂದು ರಾತ್ರಿ ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ನಿವಾಸಿ ಕೇಶವ ಕಲ್ಕುರ ಎಂಬುವರ ಜಾಗದ ಬಳಿ ಇರುವ ಹಾಡಿ ಪ್ರದೇಶದಲ್ಲಿ ಸಾರ್ವಜನಿಕವಾಗಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೀಟ್ ಸಿಬ್ಬಂದಿಯವರಿಂದ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್ಐ ರವರ ಸೂಚನೆಯಂತೆ ಎಎಸ್ಐ ವಿಠ್ಠಲ್ ಎಮ್ ಅವರು ಸಿಬ್ಬಂದಿಯವರೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸ್ಥಳದಲ್ಲಿದ್ದ ಹರೀಶ್, ಗುರುರಾಜ್, ವೆಂಕಟೇಶ್ ಪೂಜಾರಿ, ಹರ್ಷ, ಸುರೇಶ್ ನಾಯ್ಕ, ರಾಜ ನಾಯ್ಕ, ಪೀಟರ್ ಡಿಮೆಲ್ಲೋ, ನಾಗೇಶ, ನಾಗರಾಜ ಹಾಗೂ ರಾಜೇಶ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಜುಗಾರಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳಾದ ಚಿತ್ರಗಳಿರುವ ಫ್ಲೆಕ್ಸ್ ಶೀಟ್, 06 ಮುಖದ ಡೈಸ್ ಕಾಯಿನ್‌ಗಳು, ಪ್ಲಾಸ್ಟಿಕ್ ಡಬ್ಬಿ, ಚೌಕಾಕಾರದ ಮರದ ತುಂಡು ಮತ್ತು ಕ್ಯಾಂಡಲ್‌ಗಳು, ಹಾಗೂ 3 ದ್ವಿಚಕ್ರ ವಾಹನಗಳು, 8 ಮೊಬೈಲ್ ಫೋನ್‌ಗಳನ್ನು
ವಶಪಡಿಸಿಕೊಂಡು ಒಟ್ಟು ಸ್ವತ್ತುಗಳ ಮೌಲ್ಯ ಸುಮಾರು ರೂ. 1,54,100/- ಎಂದು ಅಂದಾಜಿಸಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಪರಾಧ ಕ್ರಮಾಂಕ 46/2026 ರಂತೆ ಕಲಂ: 112 BNS ಹಾಗೂ 87 ಕರ್ನಾಟಕ ಪೊಲೀಸ್ ಕಾಯ್ದೆ (Karnataka Police Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.