ಡೈಲಿ ವಾರ್ತೆ: ಮಾ./08/2026

ಅಮಾಸೆಬೈಲು: ಅಕ್ರಮ ಜಾನುವಾರು ಸಾಗಾಟ – ವಾಹನ ಸಹಿತ ಇಬ್ಬರು ಆರೋಪಿಗಳ ಬಂಧನ

​ಅಮಾಸೆಬೈಲು: ಕುಂದಾಪುರ ತಾಲೂಕಿನ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮೂರು ಎತ್ತುಗಳನ್ನು ರಕ್ಷಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ

​ದಿನಾಂಕ 07/03/2026 ರಂದು ಸಂಜೆ ಹೊಸಂಗಡಿ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಹುಲಿಕಲ್ ಘಾಟಿ ಕಡೆಯಿಂದ ಅಕ್ರಮವಾಗಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಸಂಜೆ ಸುಮಾರು 7:00 ಗಂಟೆಗೆ ಸಂಶಯಾಸ್ಪದವಾಗಿ ಬಂದ KA-69-0742 ನೋಂದಣಿ ಸಂಖ್ಯೆಯ TATA Intra ವಾಹನವನ್ನು ತಡೆಯಲು ಪೊಲೀಸರು ಸೂಚನೆ ನೀಡಿದರು. ಆದರೆ ಚಾಲಕನು ವಾಹನವನ್ನು ನಿಲ್ಲಿಸದೆ ಅತಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.
​ಪೊಲೀಸರು ತಕ್ಷಣವೇ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಕೆರೆಕಟ್ಟೆ ಸಮೀಪ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ವಾಹನವನ್ನು ತಪಾಸಣೆ ಮಾಡಿದಾಗ, ಹಿಂಭಾಗದ ಬಾಡಿಯಲ್ಲಿ ಮೂರು ಎತ್ತುಗಳನ್ನು (ಗಂಡು ದನ) ಯಾವುದೇ ಮೇವು ಅಥವಾ ನೀರು ನೀಡದೆ, ಅತ್ಯಂತ ಹಿಂಸಾತ್ಮಕವಾಗಿ ಒಂದಕ್ಕೊಂದು ತಾಗಿಕೊಂಡು ಉಸಿರುಗಟ್ಟುವಂತೆ ಕಟ್ಟಿ ಹಾಕಿರುವುದು ಕಂಡುಬಂದಿದೆ.

​ವಿಚಾರಣೆಯ ವೇಳೆ, ಈ ಜಾನುವಾರುಗಳನ್ನು ಮಾಂಸದ ಉದ್ದೇಶಕ್ಕಾಗಿ ವಧೆ ಮಾಡಲು ಸಾಗಿಸುತ್ತಿರುವುದಾಗಿ ವಾಹನದಲ್ಲಿದ್ದವರು ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡ ಎರಡು ಎತ್ತುಗಳ ಅಂದಾಜು ಮೌಲ್ಯ 90,000/- ರೂ. ಹಾಗೂ ಸಾಗಾಟಕ್ಕೆ ಬಳಸಿದ ಟಾಟಾ ಇಂಟ್ರಾ ವಾಹನದ ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ವಾಹನದಲ್ಲಿದ್ದ ಓರ್ವ ಅಪ್ರಾಪ್ತ ಬಾಲಕ ಹಾಗೂ ಮತ್ತೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಈ ಕೆಳಗಿನ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ:
​ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ 2020 (ಕಲಂ 4, 5, 7, 12) ಪ್ರಾಣಿ ಹಿಂಸೆ ತಡೆ ಕಾಯ್ದೆ (ಕಲಂ 11(1)(d)) ಮೋಟಾರು ವಾಹನ ಕಾಯ್ದೆ (IMV Act) (ಕಲಂ 66(1) R/W 192 (A))
​ಪ್ರಸ್ತುತ ಅಮಾಸೆಬೈಲು ಪೊಲೀಸರು ಈ ಜಾಲದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.