ಡೈಲಿ ವಾರ್ತೆ: ಮಾ./09/2026

ಕುಂದಾಪುರ: ಬ್ಯಾಂಕಿಗೆ ಹೋದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

ಕುಂದಾಪುರ: ಇಲ್ಲಿನ ವಡೇರಹೋಬಳಿ ಗ್ರಾಮದ ರಾಯಪ್ಪನ ಮಠ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ 51 ವರ್ಷದ ಶರತ್ ಕುಮಾರ್ ಶೆಟ್ಟಿ ಅವರು ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿಯಂತೆ, ಮಾ.4ರಂದು ಬೆಳಿಗ್ಗೆ ಸುಮಾರು 9.30ರ ವೇಳೆಗೆ ಶರತ್ ಕುಮಾರ್ ಶೆಟ್ಟಿ ಅವರು “ಬ್ಯಾಂಕಿಗೆ ಹೋಗಿ ಬರುತ್ತೇನೆ, ಸ್ವಲ್ಪ ತಡವಾಗಬಹುದು” ಎಂದು ಮನೆಯಲ್ಲಿ ತಿಳಿಸಿ ಹೊರಗಡೆ ತೆರಳಿದ್ದರು. ಆದರೆ ಅವರು ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರೆಂದು ತಿಳಿದುಬಂದಿದೆ. ಸಂಜೆ ಮತ್ತು ರಾತ್ರಿ ಆದರೂ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಸಂಬಂಧಿಕರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕಿಲ್ಲ.
ಈ ಹಿನ್ನೆಲೆಯಲ್ಲಿ ಮಾ.5ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ನಾಪತ್ತೆಯಾದ ಶರತ್ ಕುಮಾರ್ ಶೆಟ್ಟಿ ಅವರು ಸುಮಾರು 5.6 ಅಡಿ ಎತ್ತರ ಹೊಂದಿದ್ದು, ಗೋಧಿ ಮೈಬಣ್ಣ ಮತ್ತು ಸಾಧಾರಣ ಮೈಕಟ್ಟಿನವರು. ಅವರು ಕನ್ನಡ, ತುಳು ಹಾಗೂ ಹಿಂದಿ ಭಾಷೆಗಳನ್ನು ಮಾತನಾಡಬಲ್ಲರು. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕಣ್ಣಿಗೆ ಕನ್ನಡಕ ಹಾಗೂ ಕಾಲಿಗೆ ಚಪ್ಪಲಿ ಹಾಕಿಕೊಂಡಿದ್ದರೆಂದು ತಿಳಿದುಬಂದಿದೆ.

ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08254-230338 ಅಥವಾ ತುರ್ತು ಸಂಖ್ಯೆ 9480805455 ಗೆ ಸಂಪರ್ಕಿಸಲು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.