ಡೈಲಿ ವಾರ್ತೆ: ಮಾ./08/2026

ಕೋಲಾರ: ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್ ದುರ್ಮರಣ

​ಕೋಲಾರ: ರಾಜ್ಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲೆಯ ಪ್ರಭಾವಿ ರೈತ ಮುಖಂಡರೊಬ್ಬರು ಬಲಿಯಾಗಿದ್ದಾರೆ. ಕೋಲಾರ ತಾಲ್ಲೂಕಿನ ಮುದುವಾಡಿ ಕೆರೆಗೆ ಕಾರು ಬಿದ್ದ ಪರಿಣಾಮ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್ (ಕಾಮ್ರೇಡ್ ವೆಂಕಟೇಶ್) ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.


​ಘಟನೆಯ ವಿವರ:
​ಕೋಲಾರ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೆಪಿಆರ್‌ಎಸ್ ಹಾಗೂ ಸಿಪಿಎಂ ರಾಜ್ಯ ಸಮಾವೇಶದ ಸಿದ್ಧತೆಯಲ್ಲಿ ವೆಂಕಟೇಶ್ ತೊಡಗಿದ್ದರು. ತಡರಾತ್ರಿ ಸುಮಾರು 1:30ರ ವೇಳೆಗೆ ಬ್ಯಾನರ್ ಅಳವಡಿಕೆ ಕೆಲಸ ಮುಗಿಸಿ ತಮ್ಮ ಗ್ರಾಮವಾದ ತೊರಾಂಡಹಳ್ಳಿಗೆ ಇಂಡಿಕಾ ಕಾರಿನಲ್ಲಿ ಮರಳುತ್ತಿದ್ದರು. ಮುದುವಾಡಿ ಕೆರೆಯ ಏರಿಯ ತಿರುವಿನಲ್ಲಿ ಚಲಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಥವಾ ಅಪರಿಚಿತ ವಾಹನ ಡಿಕ್ಕಿಯಾಗಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ರಾತ್ರಿ ನಡೆದ ಅಪಘಾತದ ವಿಷಯ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿದಿರಲಿಲ್ಲ. ವೆಂಕಟೇಶ್ ಅವರು ಮನೆಗೆ ತಲುಪದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಕೆರೆಯ ಏರಿಯ ಮೇಲೆ ಕಾರಿನ ನಂಬರ್ ಪ್ಲೇಟ್ ಹಾಗೂ ಮಡ್‌ಗಾರ್ಡ್ ತುಂಡುಗಳು ಪತ್ತೆಯಾಗಿವೆ. ಕೆರೆಯ ನೀರಿನಲ್ಲಿ ಡೀಸೆಲ್ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

​ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಕೋಲಾರ ಗ್ರಾಮಾಂತರ ಪೊಲೀಸರು ಕಾರನ್ನು ಮೇಲೆತ್ತಿದಾಗ, ಒಳಗೆ ವೆಂಕಟೇಶ್ ಅವರ ಶವ ಪತ್ತೆಯಾಗಿದೆ. ಕಾರಿನಿಂದ ಹೊರಬರಲು ಅವರು ಸಾಕಷ್ಟು ಪ್ರಯತ್ನ ನಡೆಸಿದ್ದರೂ, ಕೆರೆಯ ಆಳ ಹಾಗೂ ನೀರಿನ ಒತ್ತಡದಿಂದಾಗಿ ಅದು ಸಾಧ್ಯವಾಗದೆ ಕಾರಿನಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

​ಮುದುವಾಡಿ ಕೆರೆಯ ಏರಿಯ ಮೇಲೆ ಹಾದುಹೋಗುವ ಈ ರಸ್ತೆಯು ಆಂಧ್ರಪ್ರದೇಶದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ.
ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಕೆರೆಯ ಎರಡೂ ಬದಿಗಳಲ್ಲಿ ಯಾವುದೇ ತಡೆಗೋಡೆ (Safety Barriers) ಇಲ್ಲದಿರುವುದು ಈ ಭೀಕರ ದುರಂತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಅವ್ಯವಸ್ಥಿತ ತಿರುವು: ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಿರಿದಾದ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ ಎಂಬ ದೂರು ಕೇಳಿಬಂದಿದೆ.
​”ಇಡೀ ಬದುಕನ್ನು ರೈತರ ಮತ್ತು ಶೋಷಿತರ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ನಾಯಕನೊಬ್ಬ, ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಜೀವ ಕಳೆದುಕೊಂಡಿರುವುದು ಜಿಲ್ಲೆಯ ಹೋರಾಟದ ಲೋಕಕ್ಕೆ ತುಂಬಲಾರದ ನಷ್ಟ.” ಎಂದು ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
​ಘಟನೆ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆಕಸ್ಮಿಕ ಅಪಘಾತವೇ ಅಥವಾ ಬೇರೆ ವಾಹನ ಡಿಕ್ಕಿಯಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ