ಡೈಲಿ ವಾರ್ತೆ: ಮಾ./09/2026

ಮಗುವನ್ನು ಕೊಲ್ಲಲು ಯತ್ನಿಸಿ ಬಳಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ!

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ದಂಪತಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಕೆ . ಆರ್. ಪೇಟೆ ಪಟ್ಟಣದಲ್ಲಿ ನಡೆದಿದೆ.

ಹೊಸಕೋಟೆ ಗ್ರಾಮದ ದರ್ಶನ್ ಹಾಗೂ ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳೆಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ದಂಪತಿ ಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಇವರಿಗೆ ಎರಡು ವರ್ಷದ ಮಗು ಇದೆ. K. R. Pet ಪಟ್ಟಣದ ಜಯನಗರ ಬಡಾವಣೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಭಾನುವಾರ ಬೆಳಿಗ್ಗೆ (ಮಾ.9) ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿ ತಮ್ಮ ಮಗುವಿನ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಗು ಅಸ್ವಸ್ಥಗೊಂಡಿದ್ದು, ಬಳಿಕ ದಂಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಬದುಕುಳಿದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ಸಂಬಂಧ ಕೆ . ಆರ್. ಪೇಟೆ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.