ಡೈಲಿ ವಾರ್ತೆ: ಮಾ./09/2026

ಕರಾವಳಿ ಕಾಂಗ್ರೆಸ್‌ನಲ್ಲಿ ‘ಸ್ಟೇ’ ಭೂತ: ಹಿರಿಯ ನಾಯಕರ ಹಠಕ್ಕೆ ಕಾರ್ಯಕರ್ತರು ಕಂಗಾಲು!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಎನ್ನುವುದು ‘ಗಗನ ಕುಸುಮ’ ಎಂಬಂತಾಗಿದೆ.
ಮತಗಳಿಲ್ಲ ಎಂದಲ್ಲ, ಇರುವ ಮತಗಳನ್ನು ಕ್ರೂಢೀಕರಿಸುವ ಜಾಣ್ಮೆ ಮತ್ತು ಬದಲಾವಣೆಯನ್ನು ಒಪ್ಪಿಕೊಳ್ಳುವ ತಾಳ್ಮೆ ನಾಯಕರಲ್ಲಿ ಇಲ್ಲದಿರುವುದೇ ಇಂದಿನ ದುಸ್ಥಿತಿಗೆ ಕಾರಣ ಎಂಬ ಮಾತುಗಳು ಕಾರ್ಯಕರ್ತ ವಲಯದಲ್ಲಿ ಕೇಳಿಬರುತ್ತಿವೆ.

​ಅಹಿಂದ ಮತಗಳಿದ್ದರೂ ಚಲಾವಣೆಯಾಗದ ದೌರ್ಭಾಗ್ಯ!


​ಜಿಲ್ಲೆಯಲ್ಲಿ ಅಹಿಂದ ಮತಗಳ ಸಂಖ್ಯೆ ನಿರ್ಣಾಯಕವಾಗಿದೆ. ಆದರೆ ಕಾಂಗ್ರೆಸ್ ನಾಯಕರ ದಿವ್ಯ ನಿರ್ಲಕ್ಷ್ಯ ಮತ್ತು ಬಿಜೆಪಿಯ ಪ್ರಬಲ ಹಿಂದುತ್ವದ ರಾಜಕಾರಣದ ಮುಂದೆ ಈ ಮತಗಳು ಕಾಂಗ್ರೆಸ್ ಬುಟ್ಟಿಗೆ ಬೀಳುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 2018 ಮತ್ತು 2023ರ ವಿಧಾನಸಭಾ ಚುನಾವಣೆಗಳಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಆದರೂ ಹಿರಿಯ ನಾಯಕರು ಮಾತ್ರ ತಮ್ಮ ‘ಪಟ್ಟದ ಕುರ್ಚಿ’ ಬಿಟ್ಟುಕೊಡಲು ತಯಾರಿಲ್ಲದಿರುವುದು ಪಕ್ಷದ ಭವಿಷ್ಯವನ್ನು ಅಂಧಕಾರಕ್ಕೆ ದೂಡುತ್ತಿದೆ.

​ನೇಮಕಾತಿ ಬೆನ್ನಲ್ಲೇ ಬೀಳುತ್ತಿದೆ ‘ಸ್ಟೇ’ ಆರ್ಡರ್!

ಉಡುಪಿ ಕಾಂಗ್ರೆಸ್‌ನಲ್ಲಿ ಹೊಸಬರಿಗೆ ಅವಕಾಶ ನೀಡಲು ಹೋದಾಗಲೆಲ್ಲಾ ಹಿರಿಯರ ‘ಅದೃಶ್ಯ ಹಸ್ತ’ ಕೆಲಸ ಮಾಡುತ್ತಿದೆ. ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ನೇಮಕಾತಿಗೊಂಡ ಅನೇಕರಿಗೆ ಈ ‘ಸ್ಟೇ ಆರ್ಡರ್’ ಭೂತ ಬೆನ್ನತ್ತಿರುವುದು ಸುಳ್ಳಲ್ಲ.

​ಕಿಶನ್ ಹೆಗ್ಡೆ ಪ್ರಕರಣ:

2024ರ ಲೋಕಸಭಾ ಚುನಾವಣೆ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆಯವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿತ್ತು. ಆದರೆ ಅಭ್ಯರ್ಥಿ ಮತ್ತು ಅಧ್ಯಕ್ಷರು ಇಬ್ಬರೂ ಒಂದೇ ಸಮುದಾಯದವರು ಎಂಬ ನೆಪವೊಡ್ಡಿ ಇವರ ನೇಮಕಾತಿಗೆ ತಡೆಯಾಜ್ಞೆ ತರಲಾಯಿತು. ಫಲಿತಾಂಶ? ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲೊಪ್ಪಬೇಕಾಯಿತು.

​ಕೋಟ ಬ್ಲಾಕ್ ಗೊಂದಲ:

ಸತತ 17 ವರ್ಷಗಳಿಂದ ಬ್ಲಾಕ್ ಅಧ್ಯಕ್ಷರಾಗಿರುವ ಶಂಕರ್ ಕುಂದರ್ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವವರೆಗೆ ಕುರ್ಚಿ ಬಿಡುವುದಿಲ್ಲ ಎಂಬ ಹಠ. ಪರಿಣಾಮ, ಶಂಭು ಪೂಜಾರಿ ಮತ್ತು ನಂತರದ ದಿನಗಳಲ್ಲಿ ಪ್ರಭಾವಿ ಸಹಕಾರಿ ಧುರೀಣ ತಿಮ್ಮ ಪೂಜಾರಿಯವರ ನೇಮಕಾತಿಗೂ ‘ಸ್ಟೇ’ ಭಾಗ್ಯ ಲಭಿಸಿದೆ.

​ಕುಂದಾಪುರದ ಜಟಾಪಟಿ:

ಇತ್ತೀಚೆಗಷ್ಟೇ ವಾಗ್ಮಿ ಹಾಗೂ ಯುವ ಮುಖಂಡ ವಿಕಾಸ್ ಹೆಗ್ಡೆಯವರನ್ನು ಕುಂದಾಪುರ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ವಾರಾಹಿ ನೀರಾವರಿ ಯೋಜನೆ ವಿಚಾರದಲ್ಲಿ ಹಿರಿಯ ನಾಯಕರಾದ ಪ್ರತಾಪ್ ಚಂದ್ರ ಶೆಟ್ಟಿಯವರ ಪರ ನಿಲ್ಲದೆ, ಗೋಪಾಲ ಪೂಜಾರಿಯವರ ಜೊತೆ ಗುರುತಿಸಿಕೊಂಡಿದ್ದೇ ವಿಕಾಸ್‌ಗೆ ಮುಳುವಾಯಿತು. ಹಿರಿಯರ ಹಠದ ಮುಂದೆ ಹೈಕಮಾಂಡ್ ಮಣಿದು ಮತ್ತೆ ‘ಸ್ಟೇ’ ನೀಡಿದೆ.

​’ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು’!


​”ಹಿರಿಯ ನಾಯಕರಿಗೆ ರಾಜ್ಯದಲ್ಲಿ ನಿಗಮ ಮಂಡಳಿ ಸ್ಥಾನ ಸಿಗುತ್ತಿಲ್ಲ, ಇತ್ತ ಕಿರಿಯರಿಗೆ ಪಕ್ಷದಲ್ಲಿ ಸ್ಥಾನ ಬಿಟ್ಟುಕೊಡುತ್ತಿಲ್ಲ” ಎಂಬಂತಾಗಿದೆ ಜಿಲ್ಲಾ ಕಾಂಗ್ರೆಸ್ ಪರಿಸ್ಥಿತಿ. ಹಿರಿಯರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಪಕ್ಷವನ್ನು ಕರಾವಳಿಯಲ್ಲಿ ಮಕಾಡೆ ಮಲಗಿಸುತ್ತಿದ್ದರೂ, ರಾಜ್ಯ ನಾಯಕರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.
​ಜಿಲ್ಲಾ ನಾಯಕರ ಈ ಆಂತರಿಕ ಕಚ್ಚಾಟ ಮತ್ತು ಅಧಿಕಾರ ಲಾಲಸೆ ನಿಜಕ್ಕೂ ಬಿಜೆಪಿ ಪಾಲಿಗೆ ವರದಾನವಾಗುತ್ತಿದೆ. ಕಾರ್ಯಕರ್ತರು ನಾಯಕರಿಲ್ಲದೆ ಕಂಗಾಲಾಗಿದ್ದರೆ, ಹಿರಿಯರು ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಜಿಲ್ಲಾ ಕಾಂಗ್ರೆಸ್‌ಗೆ ಹಿಡಿದಿರುವ ಈ ‘ಸ್ಟೇ’ ಗ್ರಹಣ ಬಿಡುವುದು ಯಾವಾಗ? ಎಂಬುದು ಈಗ ಸಾಮಾನ್ಯ ಮತದಾರನ ಪ್ರಶ್ನೆಯಾಗಿದೆ.