ಡೈಲಿವಾರ್ತೆ:22/ಮಾರ್ಚ್/2026

ಉಡುಪಿ: ಹಾಲಿ-ಮಾಜಿ ಶಾಸಕರ ನಡುವೆ ‘ರೆಸಾರ್ಟ್’ ಸಂಘರ್ಷ; ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ರಘುಪತಿ ಭಟ್ ಧರಣಿ ಸತ್ಯಾಗ್ರಹದ ಎಚ್ಚರಿಕೆ

​ಉಡುಪಿ: ಕರಾವಳಿಯ ರಾಜಕೀಯ ಕೇಂದ್ರಬಿಂದು ಉಡುಪಿಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಶೀತಲ ಸಮರ ಈಗ ಬಹಿರಂಗವಾಗಿ ಸ್ಫೋಟಗೊಂಡಿದೆ.

ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ‘ಸಿಂಗಲ್ ಲೇಔಟ್’ ಅನುಮೋದನೆ ವಿಚಾರದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

​ಶಾಸಕರ ಒತ್ತಡದಿಂದಲೇ ಫೈಲ್ ತಡೆ – ರಘುಪತಿ ಭಟ್ ಗಂಭೀರ ಆರೋಪ

​ತಮ್ಮ ಸ್ವಂತ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಉದ್ದೇಶಿಸಿ ಸಲ್ಲಿಸಲಾದ ಅರ್ಜಿಗೆ ಶಾಸಕ ಯಶ್‌ಪಾಲ್ ಸುವರ್ಣ ಅವರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ರಘುಪತಿ ಭಟ್ ನೇರ ವೀರೋಧ ವ್ಯಕ್ತಪಡಿಸಿದ್ದಾರೆ.
​ 2024ರ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದರೂ, ನಿಯಮದಂತೆ ಮೂರು ತಿಂಗಳಲ್ಲಿ ಸಿಗಬೇಕಿದ್ದ ಅನುಮತಿ ಎರಡು ವರ್ಷ ಕಳೆದರೂ ಸಿಕ್ಕಿಲ್ಲ. ಹೈಕೋರ್ಟ್ 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ ಅಧಿಕಾರಿಗಳು ಶಾಸಕರ ಒತ್ತಡಕ್ಕೆ ಮಣಿದು ಕಡತವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಭಟ್ ಕಿಡಿಕಾರಿದ್ದಾರೆ.

ಸಿ.ಆರ್.ಝೆಡ್ ಮತ್ತು ವಲಯ ಬದಲಾವಣೆಯಂತಹ ಎಲ್ಲಾ ಕಾನೂನಾತ್ಮಕ ಅನುಮತಿಗಳಿದ್ದರೂ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಕ್ರಿಯೆ ತಡೆಯಲಾಗಿದೆ. “ಇದು ರಾಜಕೀಯ ಹೋರಾಟವಲ್ಲ, ನನ್ನ ವೈಯಕ್ತಿಕ ಉದ್ಯಮದ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ. ಉಡುಪಿಯ ಇತಿಹಾಸದಲ್ಲಿ ಇಂತಹ ದ್ವೇಷದ ರಾಜಕಾರಣ ಹಿಂದೆಂದೂ ಇರಲಿಲ್ಲ,” ಎಂದು ಅವರು ವಿಷಾದಿಸಿದ್ದಾರೆ.

​ಹೋರಾಟದ ಎಚ್ಚರಿಕೆ: ಶಾಸಕರ ಈ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಅವರು ಘೋಷಿಸಿದ್ದಾರೆ.

​ಅಕ್ರಮದ ವಿರುದ್ಧ ಜನರ ಧ್ವನಿಯಾಗಿದ್ದೇನೆ: ಯಶ್‌ಪಾಲ್ ಸುವರ್ಣ ಸ್ಪಷ್ಟನೆ

​ಮಾಜಿ ಶಾಸಕರ ಆರೋಪಗಳನ್ನು ತಳ್ಳಿಹಾಕಿರುವ ಶಾಸಕ ಯಶ್‌ಪಾಲ್ ಸುವರ್ಣ, ತಾವು ಕೇವಲ ನಿಯಮಾವಳಿಗಳ ಪಾಲನೆಗೆ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.
​ ಬಡಾನಿಡಿಯೂರು ಗ್ರಾಮದ ಈ ನಿರ್ದಿಷ್ಟ ಜಾಗದ ಏಕವಿನ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಯುವಕ ಮಂಡಲದ ಸದಸ್ಯರು ಅಕ್ರಮ ದಾಖಲೆ ಸೃಷ್ಟಿಯ ಬಗ್ಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದಿನ ಕಮಿಷನರ್ ಈಗಾಗಲೇ ಅಮಾನತಾಗಿದ್ದಾರೆ ಎಂದು ಯಶ್‌ಪಾಲ್ ನೆನಪಿಸಿದ್ದಾರೆ.
ಈ ವಿಚಾರ ಪ್ರಸ್ತುತ ಲೋಕಾಯುಕ್ತ ತನಿಖೆಯಲ್ಲಿದೆ ಮತ್ತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ (PIL) ದಾಖಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಮಾನುಸಾರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಹೊರತು, ಇದರಲ್ಲಿ ಯಾವುದೇ ವೈಯಕ್ತಿಕ ದುರುದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.