ಡೈಲಿವಾರ್ತೆ:22/ಮಾರ್ಚ್/2026

​ದಿ| ಜಿ.ಪಿ. ಮೊಹಮ್ಮದ್ ಗುಲ್ವಾಡಿ ಸ್ಮರಣಾರ್ಥ ‘ಫ್ರೀಡಂ ಕುಂದಾಪುರ’ ಸಂಘಟನೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಹಂಪಲು, ಅನಾಥಾಶ್ರಮದ ನಿವಾಸಿಗಳಿಗೆ ಅನ್ನದಾನ

​ಕುಂದಾಪುರ: ಸಾಮಾಜಿಕ ಹೋರಾಟಗಾರ, ದಿವಂಗತ ಜಿ.ಪಿ. ಮೊಹಮ್ಮದ್ ಗುಲ್ವಾಡಿ ಅವರ ಸವಿ ನೆನಪಿಗಾಗಿ ‘ಫ್ರೀಡಂ ಕುಂದಾಪುರ’ ಸಂಘಟನೆಯ ವತಿಯಿಂದ ಕುಂದಾಪುರ ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅನಾಥಾಶ್ರಮದ ನಿವಾಸಿಗಳಿಗೆ ಹಣ್ಣು-ಹಂಪಲು ಮತ್ತು ಅನ್ನದಾನ ಸೇವೆ ಭಾನುವಾರ (ಮಾ. 22) ನಡೆಯಿತು.

​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, “ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ಬಡವರಿಗೆ ಮತ್ತು ರೋಗಿಗಳಿಗೆ ನೆರವಾಗುವುದು ಶ್ರೇಷ್ಠ ಪುಣ್ಯದ ಕೆಲಸ. ಜಿ.ಪಿ. ಮೊಹಮ್ಮದ್ ಅವರ ಸ್ಮರಣಾರ್ಥ ಫ್ರೀಡಂ ಕುಂದಾಪುರ ತಂಡವು ಹಮ್ಮಿಕೊಂಡಿರುವ ಈ ಸೇವಾ ಕಾರ್ಯವು ಶ್ಲಾಘನೀಯ. ಇಂತಹ ದಾನ ಧರ್ಮಗಳು ಸಮಾಜಕ್ಕೆ ಮಾದರಿಯಾಗಿವೆ,” ಎಂದು ಹಾರೈಸಿದರು.

​ಕೆಸಿಎಫ್ ಕರ್ನಾಟಕ ಕಲ್ಚರಲ್ ಫೋರಂ ಮಸ್ಕತ್ ಇದರ ಅಧ್ಯಕ್ಷರಾದ ಅಯೂಬ್ ಭಾಯಿ ಮಾತನಾಡಿ, “ಸಮಾಜದಲ್ಲಿ ಅವಶ್ಯಕತೆ ಇರುವವರನ್ನು ಗುರುತಿಸಿ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾರ್ತ್ ಕರ್ನಾಟಕದ ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಲ್ಲಿ ನಾವು ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಫ್ರೀಡಂ ಕುಂದಾಪುರ ತಂಡವು ಇಂತಹ ಇನ್ನಷ್ಟು ಸಾಮಾಜಿಕ ಒಳಿತಿನ ಕೆಲಸಗಳನ್ನು ಮುಂದುವರಿಸಲಿ,” ಎಂದರು.

​ಸಂಘಟನೆಯ ಸಂಕಲ್ಪ ಅಧ್ಯಕ್ಷತೆ ವಹಿಸಿದ್ದ ಫ್ರೀಡಂ ಕುಂದಾಪುರ ಸಂಘಟನೆಯ ಅಧ್ಯಕ್ಷ ದಸ್ತಗಿರಿ ಸಾಹೇಬ್ ಕಂಡ್ಲೂರು, “ನಮ್ಮ ಹಿರಿಯರಾದ ಜಿ.ಪಿ. ಮೊಹಮ್ಮದ್ ಅವರ ಮಾರ್ಗದರ್ಶನದಲ್ಲಿ ಈ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದೇವೆ. ಅವರ ಸ್ಮರಣಾರ್ಥ ಇವತ್ತು ರೋಗಿಗಳಿಗೆ ಹಾಗೂ ಅಶಕ್ತರಿಗೆ ಕಿಟ್ ವಿತರಿಸುವ ಮೂಲಕ ಅವರ ಸಾಮಾಜಿಕ ಕಾಳಜಿಯನ್ನು ಮುಂದುವರಿಸುತ್ತಿದ್ದೇವೆ,” ಎಂದು ತಿಳಿಸಿದರು.

ಕುಂದಾಪುರ ಸರ್ಕಾರಿ ಆಸ್ಪತ್ರೆಯ 32 ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.

ಚೈತನ್ಯ ವೃದ್ಧಾಶ್ರಮದ 35 ನಿವಾಸಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ರಫೀಕ್ ಸಾಹೇಬ್, ಶಾಬಾನ್ ಹಂಗಳೂರು, ಜಮಾಲ್ ಜಾಹಿರ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಸಂಘಟನೆಯ ಕಾರ್ಯದರ್ಶಿ ಹನೀಫ್ ಗುಲ್ವಾಡಿ ಸ್ವಾಗತಿಸಿ, ಮುನಾಫ್ ಕೊಡಿ ವಂದಿಸಿದರು.