ಗೀತಾನಂದ ಫೌಂಡೇಶನ್‌ನಿಂದ ಪರಿಸರ ಜಾಗೃತಿ ಸಂದೇಶ: 96ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ 82 ಚೀಲ ಕಸ ಸಂಗ್ರಹ

ಉಡುಪಿ: ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ “96ನೇ ಆನಂದದ ಸೃಷ್ಟಿ” ಕಾರ್ಯಕ್ರಮದ ಅಂಗವಾಗಿ ವಡ್ಡರ್ಸೆ–ಸಾಹೆಬ್ರಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ಭಾನುವಾರ ಬ್ರಹತ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಈ ಅಭಿಯಾನದಲ್ಲಿ ಸಾರ್ವಜನಿಕರು ಎಸೆದಿದ್ದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪರಿಸರಕ್ಕೆ ಹೊಸ ಕಳೆ ನೀಡಲಾಯಿತು.

ಫೌಂಡೇಶನ್‌ನ ಸ್ವಯಂಸೇವಕರು ಮತ್ತು ವಡ್ಡರ್ಸೆ ಎಸ್‌ಎಲ್‌ಆರ್‌ಎಮ್ ಘಟಕದ ಸದಸ್ಯರು ಶಿಸ್ತುಬದ್ಧವಾಗಿ ಪಾಲ್ಗೊಂಡು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಅಭಿಯಾನದ ವೇಳೆ ಒಟ್ಟು 12 ಚೀಲ ಮದ್ಯದ ಬಾಟಲಿಗಳು ಸೇರಿದಂತೆ 61 ಚೀಲ ಸಾಮಾನ್ಯ ಕಸವನ್ನು ಸಂಗ್ರಹಿಸಿ, ಒಟ್ಟು 82 ಚೀಲ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಬೀದಿಗಳು, ಚರಂಡಿ ಪಕ್ಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹರಡಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸುವ ಕಾರ್ಯ ಗಮನಾರ್ಹವಾಗಿತ್ತು.
ಸಂಗ್ರಹಿಸಿದ ತ್ಯಾಜ್ಯವನ್ನು ವಡ್ಡರ್ಸೆ ಪಂಚಾಯತ್ ಸಹಯೋಗದಲ್ಲಿ ಎಸ್‌ಎಲ್‌ಆರ್‌ಎಮ್ ಘಟಕಕ್ಕೆ ಹಸ್ತಾಂತರಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಆನಂದದ ಸೃಷ್ಟಿ ತಂಡದ ಹಿರಿಯ ಸ್ವಯಂಸೇವಕರಾದ ಶ್ರೀನಿವಾಸ ಕುಂದರ್, “ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮುಂದಿನ ದಿನಗಳಲ್ಲಿ ಪಂಚಾಯತ್ ಸಹಕಾರದೊಂದಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಸದ ಎಸೆಯುವಿಕೆ ಮೇಲೆ ನಿಗಾ ವಹಿಸುವ ಯೋಜನೆ ಇದೆ. ಗ್ರಾಮಸ್ಥರು ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.