

ಡೈಲಿವಾರ್ತೆ:22/ಮಾರ್ಚ್/2026


ಮಧ್ಯಪ್ರಾಚ್ಯ ಯುದ್ಧದ ಬಿಸಿ ಬೆಂಗಳೂರಿಗೆ: ಗ್ಯಾಸ್ ಅಭಾವದಿಂದ ಹೋಟೆಲ್‌ಗಳಿಗೆ ಬೀಗ, ಮೆನುಗಳಿಗೆ ಕತ್ತರಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ತಟ್ಟಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಅಭಾವದಿಂದ ಬಹುತೇಕ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವೆಡೆ ಹೋಟೆಲ್‌ಗಳು ಬಂದ್ ಆಗಿದ್ದು, ಇನ್ನು ಕೆಲವೆಡೆ ಮೆನುಗಳನ್ನು ಕಡಿತಗೊಳಿಸಲಾಗಿದೆ.
ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪ್ರಸಿದ್ಧ ‘ಚಿಕನ್ ಕೌಂಟಿ ಫ್ಯಾಮಿಲಿ ರೆಸ್ಟೋರೆಂಟ್’ ಗ್ಯಾಸ್ ಕೊರತೆಯಿಂದ ಸಂಪೂರ್ಣವಾಗಿ ಬಂದ್ ಆಗಿದೆ. ಕಮರ್ಷಿಯಲ್ ಸಿಲಿಂಡರ್ ಲಭ್ಯತೆ ಇಲ್ಲದ ಕಾರಣ ಅಡುಗೆ ಕಾರ್ಯಾಚರಣೆ ಅಸಾಧ್ಯವಾಗಿದ್ದು, ತಾತ್ಕಾಲಿಕವಾಗಿ ಹೋಟೆಲ್ ಮುಚ್ಚಲಾಗಿದೆ ಎಂದು ನಿರ್ವಹಣಾ ಮಂಡಳಿ ತಿಳಿಸಿದೆ.
ಇತ್ತ ನಗರದ ಖ್ಯಾತ ‘ಎಂಪೈರ್ ಹೋಟೆಲ್’ಗಳಲ್ಲಿ ಸುಮಾರು ಶೇಕಡಾ 60ರಷ್ಟು ಮೆನು ಐಟಂಗಳನ್ನು ಕೈಬಿಡಲಾಗಿದೆ. ಮಟನ್, ಗ್ರಿಲ್ ಚಿಕನ್, ಶವರ್ಮಾ ಸೇರಿದಂತೆ ಹೆಚ್ಚಿನ ಗ್ಯಾಸ್ ಬಳಕೆಯ ಆಹಾರ ಪದಾರ್ಥಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಬಗ್ಗೆ ಗ್ರಾಹಕರಿಗೆ ತಿಳಿಸಲು ಹೋಟೆಲ್ ಹೊರಭಾಗದಲ್ಲೇ ಸೂಚನಾ ಫಲಕ ಅಳವಡಿಸಲಾಗಿದೆ.
ಹಲವು ಹೋಟೆಲ್‌ಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ‘ಪ್ರಿಯದರ್ಶಿನಿ’ ಹೋಟೆಲ್‌ನಲ್ಲಿ ಸೌತ್ ಇಂಡಿಯನ್ ಹಾಗೂ ನಾರ್ಥ್ ಇಂಡಿಯನ್ ಮೀಲ್ಸ್‌ಗಳನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಚೈನೀಸ್ ಹಾಗೂ ಕರೀ ಪದಾರ್ಥಗಳೂ ಲಭ್ಯವಿಲ್ಲ. ಸೀಮಿತ ಗ್ಯಾಸ್ ಲಭ್ಯತೆ ಹಿನ್ನೆಲೆಯಲ್ಲಿ ಅನ್ನ-ಸಾಂಬಾರ್ ಮತ್ತು ದೋಸೆಗಳಷ್ಟೇ ನೀಡಲಾಗುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಇದೇ ಪರಿಸ್ಥಿತಿ ರಾಜ್ಯದ ಇತರ ಭಾಗಗಳಲ್ಲೂ ಕಂಡುಬರುತ್ತಿದೆ. ಧಾರವಾಡದಲ್ಲಿ ಕೆಲವು ಹೋಟೆಲ್‌ಗಳು ಸೌದೆ (ಮರದ ಇಂಧನ) ಬಳಸಿ ಅಡುಗೆ ಮಾಡುವ ಪರಿಸ್ಥಿತಿಗೆ ತಲುಪಿವೆ. ‘ಕಮಲ್ ನಾನ್‌ವೆಜ್’ ಹೋಟೆಲ್‌ನಲ್ಲಿ ಚಿಕನ್ ಬಿರಿಯಾನಿ ಮತ್ತು ಎಗ್ ಮಸಾಲಾ ಮಾತ್ರ ಲಭ್ಯವಿದ್ದು, ಕಬಾಬ್ ಹಾಗೂ ಫಾಸ್ಟ್ ಫುಡ್ ಐಟಂಗಳನ್ನು ನಿಲ್ಲಿಸಲಾಗಿದೆ. ಸಮಸ್ಯೆ ಮುಂದುವರಿದರೆ ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಮಾಲೀಕರು ಎಚ್ಚರಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸಣ್ಣ ಗ್ಯಾಸ್ ಸಿಲಿಂಡರ್‌ಗಳಿಗೂ ಕೊರತೆ ಉಂಟಾಗಿದೆ. 5 ಕೆಜಿ ಸಿಲಿಂಡರ್‌ಗಳ ಬೆಲೆ 700 ರೂಪಾಯಿವರೆಗೆ ಏರಿಕೆಯಾಗಿದ್ದು, ಸ್ಟಾಕ್ ಕೊರತೆ ಮತ್ತು ಬೆಲೆ ಏರಿಕೆ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರವಾಸಿ ತಾಣವಾದ ಕೊಡಗಿನಲ್ಲಿ ಕೂಡ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಂದ್ ಆಗಿದ್ದು, ಪ್ರವಾಸಿಗರ ಸಂಖ್ಯೆಯೂ ಕುಸಿದಿದೆ. ಮುಗಿಲ್ ಪೇಟೆ ಸೇರಿದಂತೆ ಹಲವು ತಾಣಗಳಲ್ಲಿ ಜೀಪ್ ಚಾಲಕರು ಕೆಲಸವಿಲ್ಲದೆ ಕಂಗಾಲಾಗಿದ್ದು, ತಾತ್ಕಾಲಿಕವಾಗಿ ತೋಟ ಕೆಲಸಕ್ಕೆ ಮೊರೆ ಹೋಗಿರುವುದು ಕಂಡುಬಂದಿದೆ.
ಇನ್ನೊಂದೆಡೆ, ಕೇಂದ್ರ ಸರ್ಕಾರದಿಂದ ಕಮರ್ಷಿಯಲ್ ಗ್ಯಾಸ್ ಸರಬರಾಜು ಬಗ್ಗೆ ಭರವಸೆ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ ಗ್ಯಾಸ್ ಪೂರೈಕೆ ಸರಾಗವಾಗುವವರೆಗೆ ಹೋಟೆಲ್ ಉದ್ಯಮದಲ್ಲಿ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆ ಇದೆ.