

ಡೈಲಿವಾರ್ತೆ:24/ಮಾರ್ಚ್/2026


ಶಿರ್ವ: ಭೋಜನ ಕೂಟದಲ್ಲಿ ಗಲಾಟೆ – ಮಹಿಳೆ ಮೇಲೆ ಹಲ್ಲೆ, ಚಿನ್ನದ ಬ್ರೇಸ್‌ಲೆಟ್ ನಾಪತ್ತೆ!

ಶಿರ್ವ: ಇಲ್ಲಿನ ಬೆಳಪು ಗ್ರಾಮದ ವಿನಯನಗರದಲ್ಲಿ ನಡೆದ ಭೋಜನ ಕೂಟವೊಂದು ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಬೆಳ್ತಂಗಡಿ ಮೂಲದ ಆಯಿಷಾ (34) ಎಂಬುವವರು ಗಾಯಗೊಂಡಿದ್ದು, ಅವರ ಚಿನ್ನದ ಬ್ರೇಸ್‌ಲೆಟ್ ಕೂಡ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಗೋವಿಂದೂರಿನ ನಿವಾಸಿಯಾದ ಆಯಿಷಾ ಅವರು ಮಾಚ್ 22ರಂದು ತನ್ನ ಪತಿ ಮಹಮ್ಮದ್ ರಮೀಜ್ ಹಾಗೂ ಮಕ್ಕಳೊಂದಿಗೆ ಶಿರ್ವದ ಬೆಳಪು ಗ್ರಾಮದಲ್ಲಿರುವ ಸಂಬಂಧಿ ತಾಹೀರಾ ಎಂಬುವವರ ಮನೆಗೆ ಭೋಜನ ಕೂಟಕ್ಕೆ ಆಗಮಿಸಿದ್ದರು. ರಾತ್ರಿ ಸುಮಾರು 9:15ರ ಸುಮಾರಿಗೆ ಇಸ್ಮಾಯಿಲ್ ಎಂಬುವವರ ಕುಟುಂಬದವರು ಅಲ್ಲಿಗೆ ಬಂದಿದ್ದು, ಈ ವೇಳೆ ಮಕ್ಕಳ ಆಟದ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ರಾತ್ರಿ 10:30ರ ಸುಮಾರಿಗೆ ಆಯಿಷಾ ಅವರು ಪಾತ್ರೆ ತೊಳೆಯುತ್ತಿದ್ದಾಗ ಅಲ್ಲಿಗೆ ಬಂದ ಇಸ್ಮಾಯಿಲ್ ಅವರ ಪುತ್ರರಾದ ಪೈಜಲ್ ಮತ್ತು ರಶೀದ್ ಎಂಬುವವರು, ಆಯಿಷಾ ಅವರ ಪತಿಯನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. “ನನ್ನ ತಂಗಿಗೆ ಬೈದಿದ್ದೀಯಾ ಹಾಗೂ ನನ್ನ ಮದುವೆ ತಪ್ಪಿಸಿದ್ದೀಯಾ” ಎಂದು ಕಿರುಚಾಡುತ್ತಾ ರಮೀಜ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಪತಿಯನ್ನು ರಕ್ಷಿಸಲು ಹೋದ ಆಯಿಷಾ ಅವರ ಮೇಲೆ ಆರೋಪಿಗಳು ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ರಶೀದ್ ಎಂಬಾತ ಕಬ್ಬಿಣದ ರಾಡ್‌ನಿಂದ ಹಾಗೂ ಪೈಜಲ್ ಎಂಬಾತ ಕಬ್ಬಿಣದ ಮೆಶ್‌ನಿಂದ ಆಯಿಷಾ ಅವರ ತಲೆ ಮತ್ತು ಕಾಲಿಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳ ಪೋಷಕರು ಹಾಗೂ ಸಹೋದರಿಯರು ಕೂಡ ಹಲ್ಲೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆಯ ಸಂದರ್ಭದಲ್ಲಿ ಆಯಿಷಾ ಅವರು ಕೆಳಗೆ ಬಿದ್ದಿದ್ದು, ಈ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬ್ರೇಸ್‌ಲೆಟ್ ಕೂಡ ಕಾಣೆಯಾಗಿದೆ. ಸದ್ಯ ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.