

ಡೈಲಿವಾರ್ತೆ:24/ಮಾರ್ಚ್/2026


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ರಘುಪತಿ ಭಟ್ ಧರಣಿ: ಎರಡನೇ ದಿನಕ್ಕೆ ಮಣಿದ ಪ್ರಾಧಿಕಾರ, ನಕ್ಷೆ ಮಂಜೂರು

ಉಡುಪಿ: ಏಕ ವಿನ್ಯಾಸ ನಕ್ಷೆ (Single Layout Plan) ಅನುಮೋದನೆ ನೀಡುವಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ (UUDA) ತೋರುತ್ತಿದ್ದ ಮಂದಗತಿಯ ಧೋರಣೆಯನ್ನು ಖಂಡಿಸಿ ಮಾಜಿ ಶಾಸಕ ಕೆ. ರಘುಪತಿ ಭಟ್ ನಡೆಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ. ಪ್ರತಿಭಟನೆ ಆರಂಭವಾದ ಎರಡನೇ ದಿನವೇ ಎಚ್ಚೆತ್ತುಕೊಂಡ ಪ್ರಾಧಿಕಾರವು ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ನಕ್ಷೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ರಘುಪತಿ ಭಟ್ ಅವರು ನಕ್ಷೆ ಅನುಮೋದನೆಗಾಗಿ 2024ರ ಮಾರ್ಚ್ 20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರೂ ಕಳೆದ ಎರಡು ವರ್ಷಗಳಿಂದ ತಾಂತ್ರಿಕ ಕಾರಣಗಳನ್ನು ಒಡ್ಡಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಟ್ ಅವರು ಸೋಮವಾರ ಬೆಳಿಗ್ಗೆ 9:30ರಿಂದ ಪ್ರಾಧಿಕಾರದ ಕಚೇರಿ ಮುಂದೆ ಧರಣಿ ಆರಂಭಿಸಿದ್ದರು.
ಎರಡನೇ ದಿನಕ್ಕೆ ಮಣಿದ ಆಡಳಿತ ಮಂಡಳಿ:
ಸೋಮವಾರ ರಾತ್ರಿಯಿಡೀ ಕಚೇರಿ ಮುಂದೆಯೇ ವಾಸ್ತವ್ಯ ಹೂಡಿ ಹೋರಾಟ ಮುಂದುವರಿಸಿದ್ದ ರಘುಪತಿ ಭಟ್ ಅವರಿಗೆ ಸಾರ್ವಜನಿಕ ವಲಯದಿಂದಲೂ ಬೆಂಬಲ ವ್ಯಕ್ತವಾಗಿತ್ತು. ಇಂದು ಬೆಳಿಗ್ಗೆ ಧರಣಿ ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಏಕ ವಿನ್ಯಾಸ ನಕ್ಷೆಯನ್ನು ಮಂಜೂರು ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಸಾಮಾನ್ಯ ಜನರು ಅನುಭವಿಸುತ್ತಿರುವ ತೊಂದರೆಗೆ ಈ ಹೋರಾಟ ಒಂದು ಉತ್ತರವಾಗಿದೆ. ಎರಡು ವರ್ಷಗಳಿಂದ ಆಗದ ಕೆಲಸ ಕೇವಲ ಎರಡು ದಿನದ ಹೋರಾಟಕ್ಕೆ ಸಾಕಾರಗೊಂಡಿದೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಮಾಜಿ ಶಾಸಕರಾದ
ರಘುಪತಿ ಭಟ್ ಹೇಳಿದರು.
ವ್ಯವಸ್ಥೆಯ ವಿರುದ್ಧ ಕಿಡಿ:
ಅರ್ಜಿ ಸಲ್ಲಿಕೆಯಾಗಿ ದೀರ್ಘಕಾಲ ಕಳೆದರೂ ಅನುಮೋದನೆ ನೀಡದೆ ಸತಾಯಿಸುತ್ತಿರುವುದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ, ಬದಲಾಗಿ ಇಡೀ ಪ್ರಾಧಿಕಾರದ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ ಎಂದು ಹೋರಾಟದ ಹಾದಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನಕ್ಷೆ ಮಂಜೂರಾತಿ ಪತ್ರ ಕೈಸೇರುತ್ತಿದ್ದಂತೆಯೇ ಅವರು ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ.