ಡೈಲಿವಾರ್ತೆ:24/ಮಾರ್ಚ್/2026

ಧಾರವಾಡ: ಮಾಜಿ ಶಾಸಕರ ಪುತ್ರನ ಭೀಕರ ಕೊಲೆ ಶಂಕೆ; ಕಾರು ಸಮೇತ ಶವ ದಹನ!

​ಧಾರವಾಡ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಾಪುರ ಗ್ರಾಮದ ರೈಲ್ವೆ ಹಳಿ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಅತ್ಯಂತ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (45) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಕಾರಿನಲ್ಲೇ ಹಾಕಿ ಸುಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇಡೀ ಜಿಲ್ಲೆಯನ್ನು ಈ ಘಟನೆ ಬೆಚ್ಚಿಬೀಳಿಸಿದೆ.

​ರಾಮಾಪುರದ ರೈಲ್ವೆ ಟ್ರ್ಯಾಕ್ ಪಕ್ಕದ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಕಾರೊಂದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಕಾರಿನೊಳಗೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಶವವು ಗುರುತು ಪತ್ತೆ ಹಚ್ಚಲಾಗದಷ್ಟು ಭಸ್ಮವಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದು ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಅವರದ್ದೇ ಎಂದು ಶಂಕಿಸಲಾಗಿದೆ.

​ಕೊಲೆ ಮಾಡಿ ಸುಟ್ಟಿರುವ ಸಂಚು?
​ರಾಜು ಬೋಳಶೆಟ್ಟಿ ಅವರು ಸೋಮವಾರದಿಂದಲೇ ನಾಪತ್ತೆಯಾಗಿದ್ದರು ಎನ್ನಲಾಗಿದೆ. ದುಷ್ಕರ್ಮಿಗಳು ಅವರನ್ನು ಬೇರೆಡೆ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ರಾಮಾಪುರದ ರೈಲ್ವೆ ಹಳಿ ಬಳಿ ತಂದು, ಕಾರಿನೊಳಗೆ ಶವವಿಟ್ಟು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು
ಕಾರಿನಲ್ಲಿ ಪತ್ತೆಯಾಗಿರುವ ಮೃತದೇಹ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಡಿಎನ್‌ಎ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ಮೃತರ ಗುರುತು ಖಚಿತಪಡಿಸಲಾಗುವುದು. ಸದ್ಯಕ್ಕೆ ಎಲ್ಲಾ ಆಯಾಮಗಳಿಂದಲೂ ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್‌ಪಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.

​ರಾಜು ಬೋಳಶೆಟ್ಟಿ ಅವರು ಮಾಜಿ ಶಾಸಕರ ಪುತ್ರರಾಗಿದ್ದರೂ ರಾಜಕೀಯದಿಂದ ದೂರವಿದ್ದು, ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಗ್ರಾಮದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದ ಅವರು, ಮೃದು ಸ್ವಭಾವದವರಾಗಿದ್ದರು. “ಈ ಕಾರು ರಾಜು ಅವರದ್ದೇ ಆಗಿದೆ” ಎಂದು ಅವರ ಆಪ್ತ ಸ್ನೇಹಿತ ಶ್ರೀಧರ್ ಪೊಲೀಸರಿಗೆ ಪ್ರಾಥಮಿಕ ಹೇಳಿಕೆ ನೀಡಿದ್ದಾರೆ.

​ಧಾರವಾಡ ಗ್ರಾಮೀಣ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದೆ.
​ವಿಧಿವಿಜ್ಞಾನ ತಜ್ಞರು ಸುಟ್ಟ ಕಾರಿನ ಅವಶೇಷಗಳಿಂದ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.
​ವೈಯಕ್ತಿಕ ದ್ವೇಷವೋ ಅಥವಾ ವ್ಯವಹಾರಿಕ ಕಾರಣವೋ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಈ ಘಟನೆ ಭಾರೀ ಸಂಚಲನ ಮೂಡಿಸಿದೆ.