

ಡೈಲಿವಾರ್ತೆ:26/ಮಾರ್ಚ್/2026


ಗಂಗೊಳ್ಳಿ: ಮಸೀದಿ ಕಮಿಟಿ ವಿಚಾರಕ್ಕೆ ತಕರಾರು – ರಾಡ್‌ನಿಂದ ಹಲ್ಲೆ, ಜೀವ ಬೆದರಿಕೆ – ಪ್ರಕರಣ ದಾಖಲು

ಗಂಗೊಳ್ಳಿ: ಮಸೀದಿಯ ಧರ್ಮಗುರುಗಳಿಗೆ ಗೌರವಧನ ನೀಡುವ ವಿಚಾರದಲ್ಲಿ ಉಂಟಾದ ಮನಸ್ತಾಪವು ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಹಕ್ಲಾಡಿ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ನಡೆದಿದೆ.
ಪಿರ್ಯಾದಿದಾರರಾದ ಅಮೀರ್ ಬಾಷಾ (54) ಅವರ ದೂರಿನ ಪ್ರಕಾರ, ಅವರ ತಮ್ಮ ಇಬ್ರಾಹಿಂ ಅವರು ಮಸೀದಿ ಕಮಿಟಿಯ ಅಧ್ಯಕ್ಷರಾಗಿದ್ದು, ರಂಜಾನ್ ಹಬ್ಬದ ಅಂಗವಾಗಿ ಮಸೀದಿಯ ಧರ್ಮಗುರುಗಳಿಗೆ ನೀಡಲು ಪ್ರತಿ ಕುಟುಂಬದಿಂದ ಹಣ ಸಂಗ್ರಹ ಮಾಡಲಾಗುತ್ತಿತ್ತು. ಕೆಲವರು ಇದಕ್ಕೆ ಸ್ಪಂದಿಸದ ಹಿನ್ನೆಲೆ, ಇಬ್ರಾಹಿಂ ಅವರು ಸ್ವತಃ 45,000 ರೂಪಾಯಿ ಸಂಗ್ರಹಿಸಿ ಧರ್ಮಗುರುಗಳಿಗೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಆರೋಪಿಗಳಲ್ಲಿ ಅಸಮಾಧಾನ ಉಂಟಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾರ್ಚ್ 23ರಂದು ರಾತ್ರಿ ಸುಮಾರು 8:30 ಗಂಟೆಗೆ, ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವೇಳೆ, ಆರೋಪಿಗಳಾದ ಅಯೂಬ್, ಮಕ್ಬುಲ್ ಮತ್ತು ಅಕ್ಬರ್ ಸೇರಿದಂತೆ ಇತರರು ಇಬ್ರಾಹಿಂ ಅವರನ್ನು ಅವಾಚ್ಯವಾಗಿ ಬೈದು ದಾರಿ ತಡೆದಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅಯೂಬ್ ರಾಡ್‌ನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ತಡೆಯಲು ಹೋದ ಅಮೀರ್ ಬಾಷಾ ಅವರಿಗೆ ಪೆಟ್ಟು ಬಿದ್ದಿದೆ. ಇದೇ ವೇಳೆ ರಿಶಾನ್ ಮತ್ತು ಸಮರ್ ಮೇಲೆಯೂ ಹಲ್ಲೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಆರೋಪಿಗಳು ಜೀವ ಬೆದರಿಕೆ ಹಾಕಿರುವುದಾಗಿ ಪಿರ್ಯಾದಿದಾರರು ತಿಳಿಸಿದ್ದಾರೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.