ಡೈಲಿವಾರ್ತೆ:26/ಮಾರ್ಚ್/2026

ಅಂಕೋಲಾ ಕಾಂಗ್ರೆಸ್ ಮುಖಂಡನ ಹತ್ಯೆ ಯತ್ನ: ಗೋವಾ ಮೂಲದ ನಾಲ್ವರು ಆರೋಪಿಗಳ ಬಂಧನ, ರಾಜಕೀಯ ವೈಷಮ್ಯದ ವಾಸನೆ!

​ಅಂಕೋಲಾ/ಕಾರವಾರ: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಆಪ್ತ ಗೋಪಾಲಕೃಷ್ಣ ನಾಯ್ಕ ಅವರ ಮೇಲಿನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾ ಮೂಲದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಇದು ವೈಯಕ್ತಿಕ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ‘ಸುಪಾರಿ’ ಕೃತ್ಯ ಎಂಬ ಅನುಮಾನಗಳು ಬಲವಾಗಿವೆ.
​ಮೂರು ತಿಂಗಳಿನಿಂದ ನಡೆದಿದ್ದ ‘ಡೆತ್ ಸ್ಕೆಚ್’
​ಗೋಪಾಲಕೃಷ್ಣ ನಾಯ್ಕ ಅವರನ್ನು ಮುಗಿಸಲು ಹಂತಕರು ಕಳೆದ ಮೂರು ತಿಂಗಳಿನಿಂದ ಅಂಕೋಲಾದಲ್ಲಿಯೇ ಬಾಡಿಗೆ ಮನೆ ಪಡೆದು ಹೊಂಚು ಹಾಕುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಸದಾ ಬೆಂಬಲಿಗರ ನಡುವೆ ಇರುತ್ತಿದ್ದ ನಾಯ್ಕ ಅವರು ನಿನ್ನೆ ಕ್ಷೌರದ ಅಂಗಡಿಗೆ ಒಬ್ಬರೇ ತೆರಳಿದ್ದನ್ನು ಗಮನಿಸಿದ ಹಂತಕರು ಅಟ್ಯಾಕ್ ಮಾಡಿದ್ದರು. ಆದರೆ, ಸಮಯಪ್ರಜ್ಞೆ ಮೆರೆದ ನಾಯ್ಕ ಅವರು ಹತ್ತಿರದ ಬ್ಯಾಂಕ್ ಒಂದರ ಒಳಗೆ ಓಡಿ ಹೋಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ.

​ಸುಪಾರಿ ಹಿಂದೆ ಅಂಕೋಲಾದ ‘ಪ್ರಭಾವಿ’ ಕೈವಾಡ?
​ಬಂಧಿತ ಆರೋಪಿಗಳ ವಿಚಾರಣೆಯಿಂದ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಅಂಕೋಲಾದ ಪ್ರಭಾವಿ ವ್ಯಕ್ತಿಯೊಬ್ಬರು ಗೋಪಾಲಕೃಷ್ಣ ನಾಯ್ಕ ಅವರ ಭಾವಚಿತ್ರ ನೀಡಿ ಕೊಲೆಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಈ ಹಿಂದೆ ನಡೆದ ಸಹಕಾರಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಉಂಟಾದ ತೀವ್ರ ಹಣಾಹಣಿ ಮತ್ತು ವೈಮನಸ್ಸು ಈ ಕೃತ್ಯಕ್ಕೆ ಪ್ರೇರಣೆ ನೀಡಿರುವ ಸಾಧ್ಯತೆ ಇದೆ.

​ಕ್ಷೇತ್ರದಲ್ಲಿ ಗೋಪಾಲಕೃಷ್ಣ ನಾಯ್ಕ ಅವರ ರಾಜಕೀಯ ಪ್ರಭಾವ ಹೆಚ್ಚುತ್ತಿರುವುದು ವಿರೋಧಿಗಳ ಕಣ್ಣು ಕೆಂಪಾಗಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

​ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಗೋವಾದಲ್ಲಿ ತಡರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಅವರು ಕಾರವಾರದಲ್ಲಿಯೇ ಮೊಕ್ಕಾಂ ಹೂಡಿದ್ದು, ಪ್ರಕರಣದ ಹಿಂದಿರುವ ಆ ‘ಪ್ರಭಾವಿ’ ವ್ಯಕ್ತಿ ಯಾರು ಎಂಬುದು ಶೀಘ್ರವೇ ಬಯಲಾಗಲಿದೆ.