

ಡೈಲಿವಾರ್ತೆ:26/ಮಾರ್ಚ್/2026


ಕುಂದಾಪುರ: ಬಿಟ್‌ಕಾಯಿನ್ ಹೂಡಿಕೆ ಹೆಸರಿನಲ್ಲಿ 17 ಲಕ್ಷ ವಂಚನೆ – ಮಹಿಳೆಗೆ ಜಾತಿ ನಿಂದನೆ, ಜೀವ ಬೆದರಿಕೆ ಆರೋಪ

ಕುಂದಾಪುರ: ಆನ್‌ಲೈನ್ ಮೂಲಕ ಬಿಟ್‌ಕಾಯಿನ್ ಹೂಡಿಕೆ ಮಾಡಿ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.
ಹಾಲಾಡಿ ಗ್ರಾಮದ ಯಶೋಧ (43) ಅವರು ನೀಡಿದ ದೂರಿನಂತೆ, ಅಂಕದಕಟ್ಟೆಯ ಚಂದ್ರಿಕಾ (38) ಹಾಗೂ ಶಿವಮೊಗ್ಗ ಮೂಲದ ಭಾಸ್ಕರ (45) ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರಾದವರು ಬಿಟ್‌ಕಾಯಿನ್ ಹೂಡಿಕೆ ಕಾನೂನಾತ್ಮಕವಾಗಿದ್ದು, ತಮ್ಮ ಬಳಿ ಲೈಸನ್ಸ್ ಇದೆ ಎಂದು ಸುಳ್ಳು ಹೇಳಿ ನಕಲಿ ದಾಖಲೆಗಳನ್ನು ತೋರಿಸಿ ಪಿರ್ಯಾದಿದಾರರನ್ನು ನಂಬಿಸಿದ್ದರು ಎನ್ನಲಾಗಿದೆ. ಬೈಂದೂರಿನ ಪ್ರದೀಪ್ ಶೆಟ್ಟಿ ಮೂಲಕ ಪರಿಚಯವಾಗಿ, ಕೋಟೇಶ್ವರದ ಅಂಕದಕಟ್ಟೆ ಸಹನಾ ಹಾಲ್ ಸಮೀಪ ಇರುವ ಕಚೇರಿಗೆ ಕರೆಯಿಸಿಕೊಂಡು 11 ಡಿಸೆಂಬರ್ 2024 ರಂದು ಮೊದಲಿಗೆ ₹3.80 ಲಕ್ಷ ಪಡೆದುಕೊಂಡಿದ್ದರು. ಬಳಿಕ ಹಂತ ಹಂತವಾಗಿ ಒಟ್ಟು ₹17 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೂಡಿಕೆ ಮಾಡಿದ ಹಣಕ್ಕೆ ಸಂಬಂಧಿಸಿದ ಬಾಂಡ್ ನೀಡುವುದನ್ನು ಆರೋಪಿತರು ಮುಂದೂಡುತ್ತಾ ಬಂದಿದ್ದು, ಮಾರ್ಚ್ 16, 2026 ರಂದು ಕಚೇರಿಗೆ ತೆರಳಿ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಮಾತ್ರವಲ್ಲದೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಪಿರ್ಯಾದಿದಾರರ ಜಾತಿಯನ್ನು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ರೀತಿಯಲ್ಲಿ ಪಿರ್ಯಾದಿದಾರರ ಬಂಧುಗಳು ಮತ್ತು ಪರಿಚಿತರಾದ ಶಂಕರ ನಾಯ್ಕ, ಲೀಲಾ ಹಾಗೂ ನಾಗಶ್ರೀ ಅವರಿಂದಲೂ ಹಣ ಪಡೆದು ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಎಸ್‌ಸಿ/ಎಸ್‌ಟಿ ಅಟ್ಟ್ರಾಸಿಟಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ.