ಡೈಲಿವಾರ್ತೆ:26/ಮಾರ್ಚ್/2026

ಬೈಂದೂರು: ಹೆಚ್ಚಿನ ವರದಕ್ಷಿಣೆಗೆ ಪೀಡಿಸಿ ಪತ್ನಿ ಹಾಗೂ ಸಂಬಂಧಿಕರ ಮೇಲೆ ಹಲ್ಲೆ – ಐವರ ವಿರುದ್ಧ ಪ್ರಕರಣ ದಾಖಲು

​ಬೈಂದೂರು: ವಿವಾಹಿತ ಮಹಿಳೆಗೆ ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಬಳಿಕ ಆಕೆ ಮತ್ತು ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ ಒಟ್ಟು ಐವರು ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

​ಘಟನೆಯ ಹಿನ್ನೆಲೆ:
​ಶಿರೂರು ಗ್ರಾಮದ ನಿವಾಸಿ ಸುಮತಿ (36) ಎಂಬುವವರು 2014ರಲ್ಲಿ ಆರೋಪಿ ರಾಘವೇಂದ್ರ ಶೆಟ್ಟಿ ಎಂಬವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ ಸುಮತಿ ಅವರ ಮನೆಯವರು 30 ಪವನ್ ಚಿನ್ನಾಭರಣಗಳನ್ನು ನೀಡಿದ್ದರು. ವೈವಾಹಿಕ ಜೀವನದ ಆರಂಭದಲ್ಲಿ ದಂಪತಿ ಅಲಂದೂರು ತೋಟದ ಮನೆಯಲ್ಲಿ ವಾಸವಾಗಿದ್ದರು.

​ದೂರುದಾರರ ಪ್ರಕಾರ, 2018ರಲ್ಲಿ ಗಂಡು ಮಗು ಜನಿಸಿದ ಬಳಿಕ ಆರೋಪಿಗಳಾದ ಪಾರ್ವತಿ ಶೆಡ್ತಿ ಮತ್ತು ಸುಮಲತಾ ಅವರು ಉಳಿದ ಆರೋಪಿಗಳ ಕುಮ್ಮಕ್ಕಿನಿಂದ ಸುಮತಿ ಅವರಿಗೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಅಲ್ಲದೆ, ಸುಮತಿ ಅವರಿಗೆ ಸೇರಿದ ಚಿನ್ನಾಭರಣಗಳನ್ನು ಪತಿ ರಾಘವೇಂದ್ರ ಶೆಟ್ಟಿ ಬಲವಂತವಾಗಿ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದಿದ್ದು, ಅದನ್ನು ಬಿಡಿಸಿಕೊಡದೆ ಸತಾಯಿಸುತ್ತಿದ್ದರು ಎಂದು ದೂರಲಾಗಿದೆ.

​ದೈಹಿಕ ಹಲ್ಲೆ ಮತ್ತು ಕೊಲೆ ಬೆದರಿಕೆ:
​ಇತ್ತೀಚೆಗೆ ಮಾರ್ಚ್ 1, 2026 ರಂದು ಸುಮತಿ ಅವರು ಮಕ್ಕಳೊಂದಿಗೆ ಪತಿ ಮನೆಗೆ ಹೋದಾಗ, ಆರೋಪಿಗಳಾದ ರಾಘವೇಂದ್ರ, ಪಾರ್ವತಿ ಮತ್ತು ಸುಮಲತಾ ಅವರು ಮನೆಯೊಳಗೆ ಸೇರಿಸದೆ ಹೊರಗೆ ತಳ್ಳಿ, ಕೋಲಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
​ಅಷ್ಟಕ್ಕೇ ನಿಲ್ಲದೆ, ಮಾರ್ಚ್ 6ರಂದು ರಾತ್ರಿ ವೇಳೆ ಪತಿ ರಾಘವೇಂದ್ರ ಶೆಟ್ಟಿ ಸುಮತಿ ಅವರ ತವರು ಮನೆಗೆ ತೆರಳಿ ಏಕಾಏಕಿ ಜಗಳ ತೆಗೆದು ಸುಮತಿ ಅವರ ಮೇಲೆ ಹಲ್ಲೆ ನಡೆಸಿ ತುಳಿದಿದ್ದಾರೆ. ಇದನ್ನು ತಡೆಯಲು ಬಂದ ಸುಮತಿ ಅವರ ತಾಯಿ ಮತ್ತು ದೊಡ್ಡಮ್ಮನ ಮೇಲೂ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

​ಸುಮತಿ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ರಾಘವೇಂದ್ರ ಶೆಟ್ಟಿ, ಪಾರ್ವತಿ ಶೆಡ್ತಿ, ಸುಮಲತಾ, ಕರುಣಾಕರ ಶೆಟ್ಟಿ ಮತ್ತು ನಾಗೇಂದ್ರ ಶೆಟ್ಟಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85, 115(2), 118(1), 352, 351(2) ಜೊತೆಗೆ 3(5) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ (DP Act) ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.