ಡೈಲಿವಾರ್ತೆ:27/ಮಾರ್ಚ್/2026

ಉಡುಪಿ| ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ: ಜಿಲ್ಲಾಧ್ಯಕ್ಷೆ ವಿರುದ್ಧ ಗಂಭೀರ ಆರೋಪ, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ

​ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಮಹಿಳಾ ಘಟಕದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದ್ದು, ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ ಅವರ ಏಕಪಕ್ಷೀಯ ನಿರ್ಧಾರ ಹಾಗೂ ಸಂಘಟನಾ ವಿರೋಧಿ ಚಟುವಟಿಕೆಗಳನ್ನು ಖಂಡಿಸಿ ಪದಾಧಿಕಾರಿಗಳು ಸೇರಿದಂತೆ 15ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಸಂಘಟನೆಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

​ಶುಕ್ರವಾರ ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಕಾರ್ಯಕರ್ತೆ ಮೀರಾ, ಜಿಲ್ಲಾಧ್ಯಕ್ಷೆಯ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದರು.

​ಘಟಕ ಬರ್ಕಾಸ್ತಾದರೂ ‘ಸ್ವಯಂ ಘೋಷಿತ’ ಅಧ್ಯಕ್ಷಗಿರಿ: ​ಸಂಘಟನೆಯ ಆಂತರಿಕ ಕಲಹ ಹಾಗೂ ಅಸಮಾಧಾನದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ 25ರಂದು ರಾಜ್ಯ ಮಟ್ಟದ ಪದಾಧಿಕಾರಿಗಳು ಉಡುಪಿಗೆ ಭೇಟಿ ನೀಡಿ ಸಭೆ ನಡೆಸಿದ್ದರು. ಈ ವೇಳೆ ಮೇ 10ರಂದು ಚುನಾವಣೆ ನಡೆಸುವ ಭರವಸೆ ನೀಡಿ, ಪ್ರಸ್ತುತ ಇರುವ ಮಹಿಳಾ ಮತ್ತು ಪುರುಷ ಘಟಕಗಳನ್ನು ಅಧಿಕೃತವಾಗಿ ಬರ್ಕಾಸ್ತುಗೊಳಿಸಿದ್ದರು. “ಘಟಕ ಬರ್ಕಾಸ್ತಾಗಿದ್ದರೂ ಜ್ಯೋತಿ ಶೇರಿಗಾರ್ತಿ ಅವರು ತಮ್ಮ ಚೇಲಾಗಳೊಂದಿಗೆ ಸೇರಿಕೊಂಡು ತಾವೇ ಜಿಲ್ಲಾಧ್ಯಕ್ಷೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಾ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ,” ಎಂದು ಮೀರಾ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪಗಳನ್ನು ಮಂಡಿಸಿದ ಕಾರ್ಯಕರ್ತರು ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅದು ಕೇವಲ ಅಧ್ಯಕ್ಷರ ವೈಯಕ್ತಿಕ ಲಾಭಕ್ಕಾಗಿ ಇರುತ್ತದೆಯೇ ಹೊರತು ನಾಡು-ನುಡಿಯ ಹಿತಕ್ಕಲ್ಲ. ಅಲ್ಲದೆ ಸಂಘಟನೆಯ ಹೆಸರಿನಲ್ಲಿ ಡ್ರಮ್ಸ್ ಸೆಟ್, ಟ್ಯಾಬ್ಲೋ ನೆಪದಲ್ಲಿ ಸಾರ್ವಜನಿಕರಿಂದ 50 ರೂ.ನಿಂದ 500 ರೂ.ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ.
​ಸಂಘಟನೆಯ ಕಚೇರಿಯಲ್ಲಿ ಸಭೆ ನಡೆಸುವ ಬದಲು, ರಾತ್ರಿ 9 ಗಂಟೆಯ ನಂತರ ಅಜ್ಜರಕಾಡು ಪಾರ್ಕ್‌ನಲ್ಲಿ ಪುರುಷರೊಂದಿಗೆ ಅನಗತ್ಯ ಸಭೆಗಳನ್ನು ನಡೆಸುತ್ತಿದ್ದಾರೆ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಸದಸ್ಯರು ಪ್ರಶ್ನೆ ಮಾಡದಂತೆ ‘ಅಡ್ಮಿನ್ ಒನ್ಲಿ’ ಸೆಟ್ಟಿಂಗ್ ಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಜಿಲ್ಲಾ ಪುರುಷ ಘಟಕದ ಅಧ್ಯಕ್ಷರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
​”ಒಬ್ಬ ಸಾಮಾನ್ಯ ಜ್ಞಾನವಿಲ್ಲದ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿದರೆ ಸಂಘಟನೆ ಬೆಳೆಯಲು ಸಾಧ್ಯವೇ? ಅವರ ನಾಯಕತ್ವದಲ್ಲಿ ಕಾರ್ಯಕರ್ತೆಯರಿಗೆ ಗೌರವವಿಲ್ಲದಂತಾಗಿದೆ. ಹಾಗಾಗಿ ನಾವು ಸಾಮೂಹಿಕವಾಗಿ ಹೊರಬರುತ್ತಿದ್ದೇವೆ,” ಎಂದು ಪ್ರತಿಭಟನಾ ನಿರತ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದರು.

​ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪವಿತ್ರಾ ಶೆಟ್ಟಿ, ವಿಜಯ ಶ್ರೀನಿವಾಸ್, ಮಾಧವಿ ಶೆಟ್ಟಿ, ಮಮತಾ ಹಾಗೂ ಇತರರು ಉಪಸ್ಥಿತರಿದ್ದರು.