

ಡೈಲಿವಾರ್ತೆ:27/ಮಾರ್ಚ್/2026


“ಮಂದಾರ ವಿರಾಸತ್ ವೈಭವದಲ್ಲಿ ‘ವಿಲಕ್ಷ’ ಫಸ್ಟ್ ಲುಕ್ ಬಿಡುಗಡೆ: ಕಿರಿಯ ಭಜಕರಿಗೆ ಗೌರವ, ಸಂಸ್ಕೃತಿಯ ಸಂಭ್ರಮ”

ಬ್ರಹ್ಮಾವರ, ಮಾ.27: ಉಡುಪಿ ಜಿಲ್ಲೆಯ ಶಬರಿ ಫಿಲಂಸ್ ಸಹಯೋಗದಲ್ಲಿ ಆಯೋಜಿಸಲಾದ “ಮಂದಾರ ವಿರಾಸತ್” ಸಾಂಸ್ಕೃತಿಕ ವೈಭವವು ಕೀರ್ತಿಶೇಷ ಕೊರಗಪ್ಪ ವೇದಿಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಕಲೆ, ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ಲೋಕಕ್ಕೆ ಹೊಸ ಮೈಲಿಗಲ್ಲಾಗಿ ಗುರುತಿಸಿಕೊಂಡಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 🎬 “ವಿಲಕ್ಷ” ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲಾಯಿತು. ಈ ಸಂದರ್ಭ ಚಿತ್ರತಂಡದ ಬಗ್ಗೆ ಉತ್ಸಾಹಭರಿತ ನಿರೀಕ್ಷೆಗಳು ವ್ಯಕ್ತವಾಗಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತು.
ಇದೇ ವೇಳೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ “ಶ್ರೀ ಲಕ್ಷ್ಮಿ ಚನ್ನಕೇಶವ ಭಜನಾ ಮಂಡಳಿ” ಸ್ಥಾಪಿಸಿ ಹತ್ತಾರು ಮಕ್ಕಳಿಗೆ ಭಜನಾ ತರಬೇತಿ ನೀಡುತ್ತಿರುವ ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ನಿವಾಸಿ ಶ್ರೀಶ್ ಆರ್. ಬಂಗೇರ ಅವರಿಗೆ ಮಂದಾರ್ತಿ ಅಮ್ಮನ ಸನ್ನಿಧಿಯಲ್ಲಿ “ಮಂದಾರ ವಿರಾಸತ್ ಪ್ರಶಸ್ತಿ” ಪ್ರದಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಮೆರುಗು ನೀಡಿದರು.
ಸಕರಾಮ ಸ್ವಾಮಿಜಿ (ನಿವೃತ್ತ ಪ್ರಾಧ್ಯಾಪಕರು), ಖ್ಯಾತ ಚಿತ್ರನಟ ರಘು ಪಾಂಡೇಶ್ವರ, ನಿರ್ದೇಶಕ ಸಂಜಯ್ ಕಾಡೂರು, ನಂದೀಶ್ ಬಿಲ್ಲಾಡಿ, ಐರೇಬೈಲ್ ಆನಂದ ಶೆಟ್ಟಿ, ಖುಷಿ ಮೆಂಡನ್ (ಪಶು ವೈದ್ಯರು), ಯಕ್ಷಗಾನ ಕಲಾವಿದ ನರಾಡಿ ಭೋಜ ಶೆಟ್ಟಿ, ಕರಾಟೆ ಕೋಚ್ ಅಶೋಕ್ ಕುಳಲ ಹಾಗೂ ಇಂಜಿನಿಯರ್ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ಸಾಧಕರಿಗೆ ‘ಯಕ್ಷ ಮಂದಾರ’ ಪ್ರಶಸ್ತಿ ಪ್ರದಾನ, ಕಲಾ ಚಿಗುರು ಹಲ್ಯಾಡಿ ತಂಡದಿಂದ “ಹೆಂಗಸ್ ಪಂಚಿತಿ” ಹಾಸ್ಯ ಕಾರ್ಯಕ್ರಮ ಹಾಗೂ ನಂದಗೋಕುಲ ಕಲಾವಿದರಿಂದ “ಕೊಲ್ಲೂರು ಶ್ರೀ ಮೂಕಾಂಬಿಕಾ” ನೃತ್ಯ ರೂಪಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.
ವಿರಾಸತ್ ವೈಭವದ ಮೆರವಣಿಗೆ ಕಾರ್ಯಕ್ರಮದ ಅದ್ದೂರಿತನವನ್ನು ಮತ್ತಷ್ಟು ಹೆಚ್ಚಿಸಿತು.
“ತೆರೆಮರೆಯಲ್ಲಿರುವ ನೇಪಥ್ಯ ಕಲಾವಿದರನ್ನು ಗುರುತಿಸಿ ಗೌರವಿಸುವುದೇ ಮಂದಾರ ವಿರಾಸತ್‌ನ ಮೂಲ ಉದ್ದೇಶ” ಎಂದು ಸಂಘಟಕರು ತಿಳಿಸಿದ್ದಾರೆ.