ಡೈಲಿವಾರ್ತೆ:28/ಮಾರ್ಚ್/2026

ಹುಸಿ ಬಾಂಬ್ ಬೆದರಿಕೆಗಳ ಅಬ್ಬರಕ್ಕೆ ತೆರೆ: ಮೈಸೂರಿನಲ್ಲಿ ಅಡಗಿದ್ದ ಬಾಂಬ್ ಬೆದರಿಕೆ ಕಿರಾತಕ ಶ್ರೀನಿವಾಸ್ ದೆಹಲಿ ಪೊಲೀಸರ ಬಲೆಗೆ

ಮೈಸೂರು, ಮಾರ್ಚ್ 28: ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಇ-ಮೇಲ್ ಮೂಲಕ ಬಾಂಬ್ ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ.

ಬಂಧಿತನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಆತ ಮೈಸೂರು ನಗರದ ಪ್ರತಿಷ್ಠಿತ ಬೃಂದಾವನ ಬಡಾವಣೆಯ ಎರಡನೇ ಹಂತದ 6ನೇ ಕ್ರಾಸ್‌ನ ಮನೆಯಲ್ಲಿ ಅಡಗಿ ಕುಳಿತಿದ್ದನು. ಖಚಿತ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರು ಸ್ಥಳೀಯ ವಿವಿ ಪುರಂ ಪೊಲೀಸ್ ಠಾಣೆಯ ಸಹಯೋಗದಲ್ಲಿ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧನದ ವೇಳೆ ಆರೋಪಿಯ ಮನೆಯಿಂದ ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ತಾಂತ್ರಿಕ ಪರಿಶೀಲನೆಗಾಗಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅನೇಕ ಬಾರಿ ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ರವಾನಿಸಿ ಜನರಲ್ಲಿ ಭೀತಿ ಮೂಡಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ವಿಶೇಷ ತಂಡ ರಚಿಸಿ ಹಂತ ಹಂತವಾಗಿ ತನಿಖೆ ನಡೆಸಿ ಕೊನೆಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಗುತ್ತಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಜಾಲ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಬಯಲಿಗೆ ಬಂದ ಹಿನ್ನೆಲೆ, ಇದೀಗ ಬಾಂಬ್ ಬೆದರಿಕೆ ಪ್ರಕರಣದ ಆರೋಪಿ ಸಹ ಪ್ರತಿಷ್ಠಿತ ಬಡಾವಣೆಯಲ್ಲಿ ಅಡಗಿ ಇದ್ದುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಒಟ್ಟಿನಲ್ಲಿ, ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ದೆಹಲಿ ಪೊಲೀಸರ ಕಾರ್ಯಾಚರಣೆಯಿಂದ ತೆರೆ ಬಿದ್ದಿದ್ದು, ಆರೋಪಿಯ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.