ಡೈಲಿವಾರ್ತೆ:28/ಮಾರ್ಚ್/2026

ನೆಲಮಂಗಲ ಹೆದ್ದಾರಿಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಸಾವು

ನೆಲಮಂಗಲ: ಬಿರಿಯಾನಿ ತಿನ್ನಲು ತೆರಳುತ್ತಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನೆಲಮಂಗಲ–ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಭಿಲಾಷ್ (21), ಮನೋಜ್ (21) ಮತ್ತು ನವೀನ್ (21) ಮೃತರು ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಶುಕ್ರವಾರ (ಮಾ.27) ರಾತ್ರಿ ಮೂವರು ಸ್ನೇಹಿತರು ಒಂದೇ ಬೈಕ್‌ನಲ್ಲಿ ಕುಣಿಗಲ್ ಕಡೆಗೆ ಬಿರಿಯಾನಿ ತಿನ್ನಲು ತೆರಳುತ್ತಿದ್ದರು. ಈ ವೇಳೆ ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಸಮೀಪ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಾಶವಾಗಿದ್ದು, ಘಟನಾ ಸ್ಥಳದಲ್ಲಿ ಭೀಕರ ದೃಶ್ಯಗಳು ಕಂಡುಬಂದವು. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಮೃತದೇಹಗಳನ್ನು ನೆಲಮಂಗಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಯುವಕರ ಆಕಸ್ಮಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ನೇಹಿತರ ವಲಯದಲ್ಲೂ ದುಃಖದ ವಾತಾವರಣ ಆವರಿಸಿದೆ.