ಡೈಲಿವಾರ್ತೆ:28/ಮಾರ್ಚ್/2026

ಹೆದ್ದಾರಿಯಲ್ಲಿ ವೀಲಿಂಗ್ ಕ್ರೇಜ್, ಮನೆಗಳ್ಳತನದ ಸ್ಕೆಚ್: ಆರೋಪಿ ಪೌಜಾನ್ ಅಹ್ಮದ್ ಅರೆಸ್ಟ್!

​ಬೈಂದೂರು: ಮನೆಯ ಹಿಂಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಬೈಂದೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನನ್ನು ಪೌಜಾನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಈತ ಕೇವಲ ಕಳ್ಳತನದ ಯತ್ನ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ‘ವೀಲಿಂಗ್’ ಮಾಡುವ ಮೂಲಕ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದ ಸಮಾಜಘಾತಕ ಎಂಬುದೂ ಬೆಳಕಿಗೆ ಬಂದಿದೆ.

​ನಡೆದಿದ್ದೇನು?
​ಶಿರೂರು ಗ್ರಾಮದ ಕೋಣಮಕ್ಕಿ ನಿವಾಸಿ ಪಾತಿಮಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಪಾತಿಮಾ ಅವರು ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಪೌಜಾನ್ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದಾನೆ. ಅಷ್ಟಕ್ಕೆ ನಿಲ್ಲದೆ, ಮನೆಯಲ್ಲಿದ್ದ ಗೋದ್ರೇಜ್ ಅಲಮಾರಿಯನ್ನು ತೆರೆದು ನಗದು ಹಾಗೂ ಚಿನ್ನಾಭರಣಕ್ಕಾಗಿ ಜಾಲಾಡುತ್ತಿದ್ದನು. ಈ ವೇಳೆ ಮನೆಯವರ ಎಚ್ಚರಗೊಂಡು ಜೋರಾಗಿ ಬೊಬ್ಬೆ ಹಾಕಿದ್ದರಿಂದ ಗಾಬರಿಗೊಂಡ ಆರೋಪಿ ಬಂದ ದಾರಿಯಲ್ಲೇ ಪರಾರಿಯಾಗಿದ್ದನು.

​ಈ ಸಂಬಂಧ ಪಾತಿಮಾ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026 ರಂತೆ, ಹೊಸ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 331(4), 305, 62 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

​ವೀಲಿಂಗ್ ಹಾವಳಿ: ವೈರಲ್ ವೀಡಿಯೋವೇ ಮುಳುವಾಯ್ತು!
​ಬಂಧಿತ ಆರೋಪಿ ಪೌಜಾನ್ ಕೇವಲ ಕಳ್ಳತನಕ್ಕೆ ಸೀಮಿತವಾಗಿರಲಿಲ್ಲ. ಇತ್ತೀಚೆಗೆ ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಸ್ಕೂಟರ್ ಮೂಲಕ ಅತಿ ವೇಗ ಹಾಗೂ ಅಪಾಯಕಾರಿ ರೀತಿಯಲ್ಲಿ ‘ವೀಲಿಂಗ್’ ನಡೆಸಿದ್ದನು. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
​ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿಯೂ ಸಹ ಅಪರಾಧ ಕ್ರಮಾಂಕ 30/2026 ರಂತೆ ಬಿಎನ್‌ಎಸ್ ಕಲಂ 281, 125 ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ, ರಸ್ತೆಯಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದ ಯುವಕ ಈಗ ಜೈಲು ಪಾಲಾಗಿದ್ದಾನೆ.