ಡೈಲಿವಾರ್ತೆ:28/ಮಾರ್ಚ್/2026

ಕುಂದಾಪುರ: ಏಪ್ರಿಲ್ 2ರಂದು ಬೃಹತ್ ಜಿಲ್ಲಾ ಮಟ್ಟದ ಉದ್ಯೋಗ ಮೇಳ; 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

​ಕುಂದಾಪುರ: ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಅಡಿಯಲ್ಲಿ ಏಪ್ರಿಲ್ 2ರಂದು ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ-2026 ಆಯೋಜಿಸಲಾಗಿದೆ ಎಂದು ಶನಿವಾರ ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ಕಚೇರಿಯ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು.

​ಪ್ರಮುಖ ಅಂಶಗಳು:
​ದಿನಾಂಕ ಮತ್ತು ಸಮಯ: ಏಪ್ರಿಲ್ 2, 2026 (ಗುರುವಾರ), ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ.
​ಸ್ಥಳ: ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ.
​ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿಗಿಂತ ಕಡಿಮೆ ಓದಿದವರಿಂದ ಹಿಡಿದು ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ (BA, B.Com, B.Sc, BE, MBA, MSW ಇತ್ಯಾದಿ) ಅವಕಾಶವಿದೆ.
​ವಯೋಮಿತಿ: 18 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು, ತೃತೀಯ ಲಿಂಗಿಗಳು ಹಾಗೂ ವಿಶೇಷಚೇತನ ಅಭ್ಯರ್ಥಿಗಳು ಭಾಗವಹಿಸಬಹುದು.
​13,000ಕ್ಕೂ ಅಧಿಕ ಉದ್ಯೋಗಾವಕಾಶ:
​ಈ ಮೇಳದಲ್ಲಿ ಐಟಿ, ಬ್ಯಾಂಕಿಂಗ್, ಆರೋಗ್ಯ, ಕೃಷಿ, ಪ್ರವಾಸೋದ್ಯಮ ಮತ್ತು ಉತ್ಪಾದನಾ ವಲಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ 100ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿವೆ. ಪ್ರಸ್ತುತ 13,058ಕ್ಕೂ ಅಧಿಕ ವೇಕೆನ್ಸಿಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಸ್ಥಳದಲ್ಲೇ ಆಯ್ಕೆಯಾಗುವ ಅವಕಾಶವಿದೆ.

​ನೋಂದಣಿ ಪ್ರಕ್ರಿಯೆ:
​ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಸಾಧ್ಯವಾಗದಿದ್ದಲ್ಲಿ ಮೇಳದ ದಿನ ಬೆಳಿಗ್ಗೆ 9:00 ಗಂಟೆಗೆ ಸ್ಥಳದಲ್ಲೇ ಸ್ಪಾಟ್ ರಿಜಿಸ್ಟ್ರೇಷನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆಗಳ ನಕಲು ಪ್ರತಿ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋಗಳೊಂದಿಗೆ ಹಾಜರಿರಬೇಕು.

​”ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲದೆ, ನಿರುದ್ಯೋಗಿ ಯುವಕರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಈ ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ನಿರುದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ವಿಜಯ್ ಕುಮಾರ್ ಮನವಿ ಮಾಡಿದರು.

​ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಭಂಡಾರ್‌ಕಾರ್ಸ್ ಕಾಲೇಜಿನ ಪ್ರತಿನಿಧಿ ಜ್ಯೋತಿ ಸಾಲಿಗ್ರಾಮ ಹಾಗೂ ಮೈತ್ರಿ ಜೆ. ಭಟ್ ಉಪಸ್ಥಿತರಿದ್ದರು