ಡೈಲಿವಾರ್ತೆ:28/ಮಾರ್ಚ್/2026

ಬೈಂದೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಟ್ರಕ್ ನಡುವೆ ಭೀಕರ ಅಪಘಾತ – ತಾಯಿ-ಮಗಳು ಸಾವು

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ನೆಲಮಂಗಲ ನಿವಾಸಿ ರಾಘು ಎಂಬುವವರ ಪತ್ನಿ ಮಮತಾ (36) ಮತ್ತು ಪುತ್ರಿ ಧೃತಿಕಾ (14) ಮೃತಪಟ್ಟ ದುರ್ದೈವಿಗಳು. ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ರಾಘು ಅವರ ಇನ್ನೊಬ್ಬ ಪುತ್ರಿ ಜಾನವಿ (12) ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಘು ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಂದು ಕುಟುಂಬದ ಕಿರಣ್ ಕುಮಾರ್ (40, ಮಲ್ಲೇಶ್ವರಂ ನಿವಾಸಿ) ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ್ ಅವರ ಪುತ್ರಿ ಚಾರ್ವಿ (10) ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಕಾವ್ಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಪ್ರವಾಸ ಮುಗಿಸಿ ಮರಳುವಾಗ ಸಂಭವಿಸಿದ ದುರಂತ:
ಕಿರಣ್ ಹಾಗೂ ರಾಘು ಇಬ್ಬರೂ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗಿಗಳಾಗಿದ್ದು, ರಜೆ ನಿಮಿತ್ತ ಪ್ರವಾಸಕ್ಕೆ ಬಂದಿದ್ದರು. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ಮುರುಡೇಶ್ವರ ದೇವಸ್ಥಾನದ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

​ರಕ್ಷಣಾ ಕಾರ್ಯ:
ಘಟನೆ ನಡೆದ ಕೂಡಲೇ ಗಂಗೊಳ್ಳಿಯ ‘ಎಂ.ಎಚ್.ಐ ತುರ್ತು ಸ್ಪಂದನ ತಂಡ’ದ ಎರಡು ಅಂಬುಲೆನ್ಸ್ ಸಂಚಾಲಕರಾದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ಪ್ರಶಾಂತ ನಾಯಕವಾಡಿ ಮತ್ತು ಸ್ಥಳೀಯ ಸಾರ್ವಜನಿಕರು ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು.
​ಅಧಿಕಾರಿಗಳ ಭೇಟಿ:
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ, ಬೈಂದೂರು ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, 112 ಸಿಬ್ಬಂದಿ, ಹೈವೇ ಪೆಟ್ರೋಲ್ ಹಾಗೂ ಐಆರ್‌ಬಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.