ಡೈಲಿವಾರ್ತೆ:30/ಮಾರ್ಚ್/2026

ಭದ್ರಾವತಿಯಲ್ಲಿ ಭೀಕರ ಅಪಘಾತ: ಲಾರಿ ಚಕ್ರಕ್ಕೆ ಸಿಲುಕಿ ದಂಪತಿ ದುರ್ಮರಣ

​ಭದ್ರಾವತಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ, ದಂಪತಿ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಅತ್ಯಂತ ಧಾರುಣವಾಗಿ ಸಾವನ್ನಪ್ಪಿದ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್.ಕೆ. ಜಂಕ್ಷನ್ ಬಳಿ ಸಂಭವಿಸಿದೆ.

​ಮೃತರನ್ನು ತರೀಕೆರೆ ತಾಲ್ಲೂಕಿನ ಬರಗೇನಹಳ್ಳಿ ಗೌಳಿಕ್ಯಾಂಪ್ ನಿವಾಸಿ ಬಾಬು (30) ಎಂದು ಗುರುತಿಸಲಾಗಿದೆ. ಅವರ ಪತ್ನಿಯ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.

​ಘಟನೆಯ ವಿವರ:
​ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಕೆಲಸ ಮುಗಿಸಿಕೊಂಡು ದಂಪತಿ ಬೈಕ್‌ನಲ್ಲಿ ತರೀಕೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗದಿಂದ ತರೀಕೆರೆ ಮಾರ್ಗವಾಗಿ ಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದಂಪತಿ ಲಾರಿಯ ಹಿಂಬದಿಯ ಚಕ್ರದಡಿಗೆ ಸಿಲುಕಿದ್ದಾರೆ. ಬಾಬು ಅವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಅವರ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಪಕ್ಷಿ ಹಾರಿಹೋಗಿದೆ.

​ಮೂಲಗಳ ಪ್ರಕಾರ, ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.