

ಡೈಲಿವಾರ್ತೆ:30/ಮಾರ್ಚ್/2026


ಮದುವೆಯಾದ ಒಂದೇ ತಿಂಗಳಲ್ಲೇ ದುರಂತ ಅಂತ್ಯ: ಯುವ ಉದ್ಯಮಿ ವಿಷ ಸೇವಿಸಿ ಮೃತ್ಯು

ಬೆಳ್ತಂಗಡಿ, ಮಾ.30: ಮದುವೆಯಾದ ಒಂದೇ ತಿಂಗಳಲ್ಲೇ ಯುವ ಉದ್ಯಮಿಯೊಬ್ಬರು ವಿಷ ಸೇವಿಸಿ ಸಾವನ್ನಪ್ಪಿರುವ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ನಡೆದಿದೆ.
ನೆಲ್ಯಾಡಿ ನಿವಾಸಿ ಸುದೀಪ್ ರೈ (36) ಮೃತ ದುರ್ದೈವಿ.
ಇವರು ಬೆಳ್ತಂಗಡಿಯಲ್ಲಿ ‘ಎಸ್‌ಆರ್‌ಎನ್ ಗ್ರೂಪ್’ ಹೆಸರಲ್ಲಿ ಇಲೆಕ್ಟ್ರಾನಿಕ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದರು. ಕಳೆದ ಫೆಬ್ರವರಿ 17ರಂದು ಕಾರ್ಕಳ ತಾಲೂಕಿನ ಯುವತಿಯೊಂದಿಗೆ ಸಬ್-ರಿಜಿಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದರು.
ಮಾರ್ಚ್ 17ರಂದು ಸುದೀಪ್ ಅವರು ತಿಂಡಿಯೊಂದಿಗೆ ವಿಷ ಸೇವಿಸಿದ್ದಾಗಿ ತಿಳಿದುಬಂದಿದ್ದು, ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.29ರಂದು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಕಾರಣ ಸ್ಪಷ್ಟವಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.