ಡೈಲಿವಾರ್ತೆ:30/ಮಾರ್ಚ್/2026

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ‘ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್’ ಲೋಕಾರ್ಪಣೆ: ಸರ್ಕಾರ ಮಾಡಬೇಕಾದ ಕೆಲಸವನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮಾಡಿದೆ – ಸಂಸದ ಕೋಟ

ಬ್ರಹ್ಮಾವರ: ಯಾವುದೇ ಸರ್ಕಾರಿ ಅನುದಾನದ ಹಂಗಿಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕ್ರೀಡಾ ಉದ್ದೇಶಕ್ಕಾಗಿ ಸಮಾಜಕ್ಕೆ ಅರ್ಪಿಸಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯ ಶ್ಲಾಘನೀಯ. ನಿಜಕ್ಕೂ ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಚಂದ್ರಶೇಖರ ಹೆಗ್ಡೆ ಮತ್ತು ಅವರ ತಂಡ ಮಾಡಿ ತೋರಿಸಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಭಾನುವಾರ ಸಂಜೆ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್’ ನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಿರಿಯರಾದ ಟಿ. ಎಂ. ಎ. ಪೈ, ಶ್ರೀನಿವಾಸ ಮಲ್ಯ ಅವರ ದೂರದೃಷ್ಟಿಯಿಂದ ಜಿಲ್ಲೆ ಹೇಗೆ ಮುಂಚೂಣಿಯಲ್ಲಿದೆಯೋ, ಅದೇ ಹಾದಿಯಲ್ಲಿ ಇಂದು ಈ ಸ್ಪೋರ್ಟ್ಸ್ ಕ್ಲಬ್ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ ಎಂದು ಸಂಸದರು ಅಭಿಪ್ರಾಯಪಟ್ಟರು.
ಅಲ್ಲದೆ ರೈಲ್ವೆ ಅಭಿವೃದ್ಧಿ ಬಗ್ಗೆ ಮಾತನಾಡಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಮತ್ತು ಹಳಿ ದ್ವಿಪಥಗೊಳಿಸುವ ಅಗತ್ಯವಿದೆ. ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ವಿಸ್ತರಣೆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದ್ದು, ಮುಂದಿನ ತಿಂಗಳೊಳಗೆ ಶುಭಸುದ್ದಿ ಸಿಗುವ ನಿರೀಕ್ಷೆಯಿದೆ ಎಂದರು.
ಹೆದ್ದಾರಿ ಸುರಕ್ಷತೆ ಬಗ್ಗೆ ಮಾತನಾಡಿ ಹೆಜಮಾಡಿಯಿಂದ ತಲ್ಲೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ತಡೆಯಲು 64 ಕಿ.ಮೀ ವ್ಯಾಪ್ತಿಯಲ್ಲಿ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ನೆರವಿನ ಭರವಸೆ: 500ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿ ಇಷ್ಟು ದೊಡ್ಡ ಮಟ್ಟದ ಮೂಲಭೂತ ಸೌಕರ್ಯ ನಿರ್ಮಿಸಿರುವುದು ದೊಡ್ಡ ಸಾಧನೆ. ಈ ಕ್ಲಬ್‌ನ ಮುಂದಿನ ಬೆಳವಣಿಗೆಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದರು ಭರವಸೆ ನೀಡಿದರು.

ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್’ ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಪಾತ್ರ ಅನನ್ಯವಾದುದು. ​​ಸಂಸ್ಥೆಯು ಕೇವಲ 21 ವರ್ಷಗಳಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳ ಮೂಲಕ ಈ ಕ್ಲಬ್ ಜಿಲ್ಲೆಯ ಗೌರವ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ‘ರಾಜ್ಯೋತ್ಸವ ಪ್ರಶಸ್ತಿ’ ಲಭಿಸಲಿ ಅಲ್ಲದೆ ಸ್ಥಳೀಯ ಕ್ರಿಕೆಟ್ ಪ್ರತಿಭೆಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.

ಕ್ರೀಡೆಯೊಂದಿಗೆ ಶೈಕ್ಷಣಿಕ ಉನ್ನತಿಯೂ ಗುರಿಯಾಗಲಿ – ಕೆ. ಜಯಪ್ರಕಾಶ್ ಹೆಗ್ಡೆ

ಶಿಕ್ಷಣ ಎಂದರೆ ಕೇವಲ ಅಕ್ಷರ ಅಭ್ಯಾಸವಲ್ಲ, ಅದರೊಂದಿಗೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮತ್ತು ಕಲೆ ಪೂರಕವಾಗಿರಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

​ಸಂಸ್ಥೆಯ ಗೌರವಾಧ್ಯಕ್ಷ ಚಂದ್ರಶೇಖರ ಹೆಗ್ಡೆ ಅವರ ಶಿಸ್ತು ಮತ್ತು ಕ್ರೀಡಾ ಕಾಳಜಿಯನ್ನು ಶ್ಲಾಘಿಸಿದ ಹೆಗ್ಡೆಯವರು, ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರ ಹೆಸರನ್ನೇ ಕ್ಲಬ್ ಹೌಸ್‌ಗೆ ಇಟ್ಟಿರುವುದು ಅವರ ನಿಸ್ವಾರ್ಥ ಸೇವೆಗೆ ಸಂದ ಗೌರವ ಎಂದರು.

ಕ್ಲಬ್‌ನಲ್ಲಿರುವ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ರೀಡೆಯಲ್ಲಿ ಯಶಸ್ಸು ಕಾಣಲು ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥಿರತೆಯೂ ಮುಖ್ಯ
ಪೋಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೇವಲ ಭಜನೆ ಅಥವಾ ಓದಿಗೆ ಸೀಮಿತವಾಗದೆ ಮಕ್ಕಳು ಸಂಗೀತ, ನೃತ್ಯ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.

ಕ್ರೀಡಾ ಸಂಘಟನೆಯ ಹೊಸ ಮನ್ವಂತರ – ಆನಂದ ಸಿ. ಕುಂದರ್

ಕಳೆದ ಎರಡು ದಶಕಗಳಿಂದ ಕ್ರೀಡಾ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್, ಇಂದು ಸ್ವಂತ ನೆಲೆಯಲ್ಲಿ ಸುಸಜ್ಜಿತ ಕ್ಲಬ್ ಹೌಸ್ ಹೊಂದುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ,” ಎಂದು ಹಿರಿಯ ಉದ್ಯಮಿ ಹಾಗೂ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಎರಡು ದಶಕಗಳ ಹಿಂದೆ ಸಣ್ಣದಾಗಿ ಆರಂಭವಾದ ಈ ಸಂಸ್ಥೆ ಇಂದು ಮೂರು ಎಕರೆ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಅಸ್ತಿತ್ವ ಕಂಡುಕೊಂಡಿರುವುದು ಹೆಮ್ಮೆಯ ಸಂಗತಿ. ಗೌರವಾಧ್ಯಕ್ಷ ಚಂದ್ರಶೇಖರ ಹೆಗ್ಡೆ ಅವರ ಸುದೀರ್ಘ ಕಾಲದ ಕನಸು ದಾನಿಗಳ ಸಹಕಾರದಿಂದ ಇಂದು ನನಸಾಗಿದೆ ಎಂದು ಶ್ಲಾಘಿಸಿದರು.

ಈ ಕೇಂದ್ರವು ಕೇವಲ ಮನೋರಂಜನೆಗೆ ಸೀಮಿತವಾಗದೆ, ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಮಕ್ಕಳು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.

ಸಮೂಹ ಪ್ರಯತ್ನದ ಫಲವಾಗಿ ಸುಸಜ್ಜಿತ ಕ್ಲಬ್ ಹೌಸ್ ನಿರ್ಮಾಣ – ಬಿಜು ಜಿ. ನಾಯರ್

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಇಂದು ರಾಜ್ಯದ ಅತ್ಯುತ್ತಮ ಕ್ಲಬ್‌ಗಳಲ್ಲಿ ಒಂದಾಗಿ ಹೊರಹೊಮ್ಮಲು ಸದಸ್ಯರ ಸಮರ್ಪಣೆ ಮತ್ತು ಅವಿರತ ಪರಿಶ್ರಮವೇ ಕಾರಣ. ನಮ್ಮೆಲ್ಲರ ದೀರ್ಘಕಾಲದ ಕನಸಾಗಿದ್ದ ಈ ಸುಸಜ್ಜಿತ ಕ್ಲಬ್ ಹೌಸ್ ಸಾಮೂಹಿಕ ಪ್ರಯತ್ನದ ಪ್ರತೀಕವಾಗಿದೆ,” ಎಂದು ಕ್ಲಬ್ ಅಧ್ಯಕ್ಷ ಬಿಜು ಜಿ. ನಾಯರ್ ಹೇಳಿದರು.

ಕ್ಲಬ್‌ನಲ್ಲಿ ಜಿಮ್ನಾಷಿಯಂ, ಸ್ವಿಮ್ಮಿಂಗ್ ಪೂಲ್, ಸ್ನೂಕರ್, ಬ್ಯಾಡ್ಮಿಂಟನ್ ಮತ್ತು ಟೆನ್ನಿಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ. ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಈ ಸೌಲಭ್ಯಗಳನ್ನು ಬಳಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ರಘುಪತಿ ಭಟ್, ಡಾ. ಪ್ರವೀಣ್ ಕುಮಾರ್, ಬೈಲೂರಿನ ಶಂಕರನಾರಾಯಣ ಕ್ಯಾಶ್ಯೂಸ್ ನ ಹೆಚ್. ಶಶಿಧರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಎಸ್.ಆರ್. ಗುಣಶೀಲ ರೆಡ್ಡಿ, ಎನ್.ಎನ್.ಟ್ರೇಡರ್ಸ್ ನ ಪೀಟರ್ ಡಿ’ಸೋಜ ಹಾಗೂ ವಂಡಾರು ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಮಾಲಕ ಸಂಪತ್ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಎಂ.ಚಂದ್ರಶೇಖರ ಹೆಗ್ಡೆ, ಸ್ಫೋರ್ಟ್ಸ್ ಕ್ಲಬ್ ಖಜಾಂಚಿ ವಿಕ್ರಂ ಪ್ರಭು, ಕಾರ್ಯದರ್ಶಿ ಗ್ರೆಗೋರಿ ಡಿ’ಸಿಲ್ವ, ಡಾ. ಪ್ರಕಾಶ್ ತೋಳಾರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಲ್ ಉದಯಕುಮಾರ್ ಶೆಟ್ಟಿ, ಬಿರ್ತಿ ರಾಜೇಶ್ ಮೊದಲದವರು ಉಪಸ್ಥಿತರಿದ್ದರು.

ಶ್ರೀಮತಿ ಸುಶೀಲಾ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಪ್ರತಿಮಾ ಅರುಣ್ ಶೆಟ್ಟಿ ಪ್ರಾರ್ಥಿಸಿದರು.
ಪತ್ರಕರ್ತ ಕೆ ಸಿ ರಾಜೇಶ್ ನೀರೂಪಿಸಿದರು.
ಕಾರ್ಯದರ್ಶಿ ಮೇಜರ್ ಜಿ.ಬಾಲಕೃಷ್ಣ ಶೆಟ್ಟಿ, ವಂದಿಸಿದರು.