ಡೈಲಿವಾರ್ತೆ:30/ಮಾರ್ಚ್/2026

ಮಲಸಮುದ್ರ ಶಿಕ್ಷಕರ ಮನೆಯಲ್ಲಿ ಕಸಾಪ ತಾಲೂಕು ಲಕ್ಷ್ಮೆಶ್ವರ ಘಟಕದಿಂದ ಮಹಾವೀರ ಜಯಂತಿ

ಲಕ್ಷ್ಮೇಶ್ವರ: ಇಂದು ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಯುದ್ಧ, ಘರ್ಷಣೆ, ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಹಾಗೂ ಸಿದ್ದಾಂತಗಳೆ ಪರಿಹಾರ.

ಸತ್ಯ,ಶಾಂತಿ,ಅಹಿಂಸೆ ಪರಮಧರ್ಮವಾಗಬೇಕಿದೆ” ಎಂದು ಖ್ಯಾತ ಸಾಹಿತಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಶಾಸ್ತ್ರ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರದ ಎಲ್.ಆರ್. ಮಲಸಮುದ್ರ ರವರ ಸ್ವಗೃಹದಲ್ಲಿ ಹಮ್ಮಿಕೊಂಡ ಮಾಸದ ಮಾತು ಕಾರ್ಯಕ್ರಮ ಸರಣಿಯ 31ನೇ ಕಾರ್ಯಕ್ರಮ ಭಗವಾನ್ ಮಹಾವೀರ ಜಯಂತಿ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಂತಕ, ಶಿಕ್ಷಕ ಎಲ್.ಆರ್. ಮಲಸಮುದ್ರ “ಯುದ್ಧವಿಲ್ಲದೆ ಜಗತ್ತು ಗೆದ್ದ ಮಹಾಪುರುಷ ಭಗವಾನ್ ಮಹಾವೀರರ ವಿಚಾರಗಳು ಪ್ರಸ್ತುತ ಜಗತ್ತಿಗೆ ಅತ್ಯಂತ ಸೂಕ್ತ ಉತ್ತರಗಳನ್ನು ನೀಡಬಲ್ಲವು. ಅವುಗಳನ್ನು ಅರಿತು ಆಚರಿಸಬೇಕಾಗಿದೆ. ಅಂತಹ ಮಹಾಪುರುಷನ ಜಯಂತಿ ಅಂಗವಾಗಿ ಅವರ ವಿಚಾರಗಳ ಚಿಂತನೆಯನ್ನು ಆಯೋಜಿಸುವ ಅವಕಾಶ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ”ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಕಲಚೇತನ ನೌಕರರ ಸಂಘದ ಗೌರವಾಧ್ಯಕ್ಷ, ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ “ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ‘ಅಹಿಂಸಾ ಪರಮೋ ಧರ್ಮಃ’ ಎನ್ನುವ ಮೂಲಮಂತ್ರವನ್ನು ಜಗತ್ತಿಗೆ ನೀಡಿದರು. ಪ್ರತಿಯೊಂದು ಜೀವಿಯಲ್ಲೂ ಆತ್ಮವಿದ್ದು, ಎಲ್ಲರೂ ಬದುಕಿ ಬದುಕಲು ಬಿಡಿ ಎಂಬ ತತ್ವವನ್ನು ಅವರು ಒತ್ತಿಹೇಳಿದರು”ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲ ಎ.ಬಿ. ಪಾಟೀಲ “ಸಾವಿರಾರು ವರ್ಷಗಳ ಇತಿಹಾಸ ಇರುವ ಜೈನ ಧರ್ಮ ಇಂದು ಜಗತ್ತಿನಲ್ಲಿ ಕಳವಳಕಾರಿ ಸ್ಥಿತಿಯಲ್ಲಿದೆ. ಸದಾ ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಧರ್ಮೀಯರು ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿದಾಗಲೂ ಹತ್ಯೆ ಮಾಡಿದವರನ್ನು ಕ್ಷಮಿಸಿದ್ದು ಜಗತ್ತಿಗೆ ಮಾದರಿ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಂಸ್ಕೃತಿ ಚಿಂತಕ ಅನಂತರಾಜ ಮಿಣಜಗಿ “ವರ್ಧಮಾನ ಮಹಾವೀರದ ಅಪರಿಗ್ರಹ,ಅನೇಕಾಂತವಾದ ತತ್ವಗಳು ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು” ಎಂದರು.

ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಗಂಬರ ಜೈನ ಸಮಾಜದ ಅಧ್ಯಕ್ಷ ಸುರೇಂದ್ರ ಗೌಡ ಪಾಟೀಲ, ವಿಶ್ರಾಂತ ಮುಖ್ಯೋಪಾಧ್ಯಾಯರಾದ ಏನ್.ಓ. ಹಡಗಲಿ, ಎ.ಎಂ. ಮಠದ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶ್ರಾವಕಿಯರಾದ ಸಾವಿತ್ರಮ್ಮ ಲಕ್ಷ್ಮಣ ಮಲಸಮುದ್ರ, ಶಾಂತಾ ಮಹಾವೀರಗೌಡ್ರು ಪಾಟೀಲ, ಸೌಮ್ಯ ಪಂಡಿತ, ವನಮಾಲಾ ಪಾಟೀಲ ಭಗವಾನ್ ಮಹಾವೀರರ ಗಾನಾಂಜಲಿ ಕಾರ್ಯಕ್ರಮ ನಡೆಸಿಕೊಟ್ಟರು. ಕು.ಸಪ್ತಮಿ ಮಂಜುನಾಥ ಗೊರವರ ಸಿತಾರ್ ವಾದನ ಕಾರ್ಯಕ್ರಮ ನೀಡಿದರು.
ಕ.ಸಾ. ಪ ಪದಾಧಿಕಾರಿಗಳಾದ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಎಸ್.ಬಿ.ಅಣ್ಣಿಗೇರಿ ವಂದಿಸಿದರು. ಕಾರ್ಯದರ್ಶಿ ಈರಣ್ಣ ಅಕ್ಕೂರ, ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಪದಾಧಿಕಾರಿಗಳಾದ ಐ.ಎ.ಬಳಿಗಾರ, ಶಂಕರ ಶಿಳ್ಳಿನ, ಎನ್.ಪಿ.ಪ್ಯಾಟಿಗೌಡ್ರ, ವಿನಯ್ ಪಾಟೀಲ, ಭೂಪಾಲ್ ಗೋಂಗಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರಾದ ಬಸಣ್ಣ ಬೆಟಗೇರಿ,ಸಿ.ಜಿ.ಹಿರೇಮಠ, ಎನ್.ಎಸ್.ಗೊರವರ,ಮುರಳೀಧರ ಹುಬ್ಬಳ್ಳಿ,ಆರ್.ಸಿ.ಪಾಟೀಲ, ಸಂಗಮೇಶ ನವಲಗುಂದ, ಮಹಾವೀರಗೌಡ್ರು ಪಾಟೀಲ, ಮಂಜುನಾಥ ಗೊರವರ, ಶಿಕ್ಷಕರಾದ ಬಸವರಾಜ ಯರಗುಪ್ಪಿ, ಡಿ.ಎನ್.ದೊಡ್ಡಮನಿ, ಆರ್.ಎಸ್. ಪಾಟೀಲ, ಉಮೇಶ ನೇಕಾರ, ಚಂದ್ರಶೇಖರ ವಡಕಣ್ಣವರ,ಎನ್. ಎಸ್. ಬಂಕಾಪುರ,ಎಸ್.ವಿ.ಕನೋಜ, ಅಜ್ಜಪ್ಪಶೆಟ್ರ, ಹೊಂಬಣ್ಣವರ ಮುಂತಾದವರು ಉಪಸ್ಥಿತರಿದ್ದರು.