ಡೈಲಿವಾರ್ತೆ:01/ಏಪ್ರಿಲ್ /2026

ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ, ಸಮಾಜ ಸೇವಕ ಚಕ್ರಪಾಣಿ ಅಡಿಗ ಹೃದಯಾಘಾತದಿಂದ ನಿಧನ

​ಬ್ರಹ್ಮಾವರ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಅಧಿಕಾರಿ ಚಕ್ರಪಾಣಿ ಅಡಿಗ (76) ಅವರು ಬುಧವಾರದಂದು (ಏಪ್ರಿಲ್ 1) ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮಾರಾಟ ತೆರಿಗೆ ಕಾಯ್ದೆ 1957ರ ಅವಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಇವರು, ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಇವರ ಕರ್ತವ್ಯ ನಿಷ್ಠೆ ಇಲಾಖೆಯ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ವೃತ್ತಿಯ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಹ್ಮಾವರದ ಪ್ರಸಿದ್ಧ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ಮಾಜಿ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಇವರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಸ್ಥಳೀಯವಾಗಿ ಜನಮನ್ನಣೆ ಗಳಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸ್ಥಳೀಯ ಗಣ್ಯರು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಸಹೋದ್ಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.